ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 14ನೇ ಘಟಿಕೋತ್ಸವ
ರಾಯಚೂರು: "ಭಾರತವನ್ನು ಆಹಾರ ಮತ್ತು ಕೃಷಿ ಉತ್ಪಾದನೆಯ ಜೊತೆಗೆ ತಂತ್ರಜ್ಞಾನ, ನಾವೀನ್ಯತೆ ಮತ್ತು ನೈತಿಕತೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವಲ್ಲಿ ಕೃಷಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಬಳ್ಳಾರಿಯಿಂದ ವರ್ಚುವಲ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು. "ಕೃಷಿ ಆಧಾರಿತ ನವೋದ್ಯಮಗಳು ಭಾರತೀಯ ಆರ್ಥಿಕತೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿವೆ. ಇಂದು ಭಾರತದ ಆರ್ಥಿಕತೆಯು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಕೃಷಿ ವಲಯವು ಅದರಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದೆ. "ಸ್ಟಾರ್ಟ್ಅಪ್ ಇಂಡಿಯಾ", "ಡಿಜಿಟಲ್ ಇಂಡಿಯಾ", "ಆತ್ಮನಿರ್ಭರ ಭಾರತ" ದಂತಹ ಯೋಜನೆಗಳಿಗೆ ಸೇರಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಯುವಪೀಳಿಗೆ ಮುಂದಾಗಬೇಕು" ಎಂದು ಕರೆ ನೀಡಿದರು.
"ಕೃಷಿ ಅಭಿವೃದ್ಧಿಯಲ್ಲಿ ತೋಟಗಾರಿಕೆ ವಲಯವು ವಿಶೇಷ ಸ್ಥಾನವನ್ನು ಹೊಂದಿದೆ. ತೋಟಗಾರಿಕಾ ಬೆಳೆಗಳು ಪ್ರತಿ ಯೂನಿಟ್ ಪ್ರದೇಶಕ್ಕೆ ಹೆಚ್ಚಿನ ಆದಾಯ, ಉದ್ಯೋಗ ಮತ್ತು ಪೋಷಣೆಯನ್ನು ನೀಡುತ್ತಿರುವುದರಿಂದ, ಈ ಬೆಳೆಗಳು ವಾಣಿಜ್ಯ ರೂಪವನ್ನು ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಈ ಬೆಳೆಗಳ ಉತ್ಪಾದನೆಯತ್ತ ರೈತರ ಒಲವು ಹೆಚ್ಚುತ್ತಿದೆ. ಇಂದು ಔಷಧೀಯ ಮತ್ತು ಸುಗಂಧ ದ್ರವ್ಯಗಳ ಆಧಾರದ ಮೇಲೆ ವ್ಯಾಪಾರವು ಪ್ರಪಂಚದಾದ್ಯಂತ ಬೆಳೆಯುತ್ತಿದೆ. ನಮ್ಮ ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಔಷಧೀಯ ಮತ್ತು ಪರಿಮಳಯುಕ್ತ ಬೆಳೆಗಳ ಮುಂದುವರಿದ ಕೃಷಿಯತ್ತ ಗಮನ ಹರಿಸಬೇಕು" ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ, ಹಾಲಿ ಕುಲ ಸಚಿವರಾದ ಡಾ.ಕೆ.ಆರ್.ದುರುಗೇಶ್, ನಿರ್ಗಮಿತ ಕುಲ ಸಚಿವ ಡಾ.ಗುರುರಾಜ್ ಸುಂಕದ ಹಾಗೂ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳಿಗೆ ಚಿನ್ನದ ಪದಕ :
ಕೊಪ್ಪಳ ಜಿಲ್ಲೆಯ ದೇವಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ವಿವಿಯ ಸ್ನಾತಕ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಪುಟ್ಟರಾಜು ಪೊಲೀಸ್ ಪಾಟೀಲ್ ಅವರು ಹಾಗೂ ಭೀಮರಾಯನಗುಡಿಯ ಬಿಎಸ್‌ಸಿ ಕಾಲೇಜಿನ ಸಾಗರ್ ಅವರು ತಲಾ 6 ಚಿನ್ನದ ಪದಕ ಮತ್ತು ರಾಯಚೂರಿನ ಬಿಎಸ್‌ಸಿ ಕಾಲೇಜಿನ ವಿದ್ಯಾರ್ಥಿ ಗಾಯತ್ರಿ ಅವರು 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಅತಿ ಹೆಚ್ಚು ಪದಕ ಪಡೆದ ಸಾಧನೆಗೆ ಪಾತ್ರರಾದರು.
ಪುಟ್ಟರಾಜು ಪೊಲೀಸ್ ಪಾಟೀಲ ಅವರು ಚಿನ್ನದ ಪದಕದ ಜೊತೆಗೆ ಎರಡು ನಗದು ಪ್ರಶಸ್ತಿ ಪಡೆದುಕೊಂಡರು. ರಾಯಚೂರಿನ ಬಿಎಸ್‌ಸಿ ಕಾಲೇಜಿನ ಲಾಲ್ ಸಾಬ್ ನದಾಫ್, ಶಿವರಾಜ ಸಜ್ಜನ್, ಅಜ್ಜಯ್ಯ, ಮೇಘ ಸಜ್ಜನ, ಪ್ರಸನ್ನ, ಅಂಬಿಕಾ, ಆಸೀಫ್ ಜಬೀನ್, ಮಲ್ಲೇಶ ಅವರು ತಲಾ 1 ಚಿನ್ನದ ಪದಕ ಗಿಟ್ಟಿಸಿದರು.
ಸ್ನಾತಕೋತ್ತರ ಪದವಿಯಲ್ಲಿ ಅನೋಫ್ ಮೇರಿ ಫೆಲಿಕ್ಸ್, ವಿಲ್ಸನ್ ಬ್ರೌನಿ, ಹರ್ಷಿನಿ ವಿ., ಅರ್ಪಿತಾ, ಆರ್.ಪಿ.ಪ್ರಗತಿ, ಶಿಲ್ಪ, ಅಮುದಲ ಸೆಮಂತಿಕ, ಆಂಡ್ರ‍್ಯೂಸ್ ಬೆನ್ನಿ ಸೀಸರ್, ಬಸವರಾಜ, ಕುಶಾಲಗೌಡ, ಅಭಿಲಾಷ ಭರತೇಶ್ ಯಲಗುದ್ರಿ, ಅನಿಲ್ ಸಿಎಸ್, ತುರ್ಪುನತಿ ಸೌಜನ್ಯ, ವಿದ್ಯಾಸಾಗರ್ ಹಾಗೂ ಅಕ್ಕಿಶೆಟ್ಟಿ ವೈಷ್ಣವಿ ಅವರು ತಲಾ 1 ಚಿನ್ನದ ಪದಕ ಪಡೆದರು.
ಈ ಸಂದರ್ಭದಲ್ಲಿ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ, ಹಾಲಿ ಕುಲ ಸಚಿವರಾದ ಡಾ.ಕೆ.ಆರ್.ದುರುಗೇಶ್, ನಿರ್ಗಮಿತ ಕುಲ ಸಚಿವ ಡಾ.ಗುರುರಾಜ್ ಸುಂಕದ ಹಾಗೂ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು.