×
Ad

ರಾಯಚೂರು | ಕರ್ತವ್ಯಲೋಪ ಎಸಗಿದ ಆರೋಪದಲ್ಲಿ 5 ಪೇದೆಗಳ ಅಮಾನತು

Update: 2024-11-05 20:16 IST

ರಾಯಚೂರು: ಅಪರಾಧ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಐವರು ಪೇದೆಗಳನ್ನು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ ಅಮಾನತುಗೊಳಿಸಿದ್ದಾರೆ.

ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಬೀರಪ್ಪ, ಶರಣಪ್ಪ, ನಗರ ಪೊಲೀಸ್ ಠಾಣೆಯ ಟೋಪಣ್ಣ, ಸಾಗರ, ಸುನೀತ ಅಮಾನತುಗೊಂಡ ಪೇದೆಗಳು. ತಾಲ್ಲೂಕಿನ ಅರಗಿನಮರ ಕ್ಯಾಂಪಿನಲ್ಲಿ ಮಟ್ಕಾ, ಇಸ್ಪಿಟ್ ಆಟ ನಡೆಯುತ್ತಿದ್ದರೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಡಿವೈಎಸ್‍ಪಿ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಅನೇಕ ಬಾರಿ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡಿದ್ದರು. ಆದರೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಲಾಗಿದೆ.

ಜಿಲ್ಲಾ ಡಿಸಿಬಿಆರ್‌ಬಿ ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ನೇತೃತ್ವದ ತಂಡ ಅರಗಿನಮರ ಕ್ಯಾಂಪಿನಲ್ಲಿ ದಾಳಿ ನಡೆಸಿದಾಗ ಅಪರಾಧ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕಂಡು ಬಂದ ಕಾರಣ ಗ್ರಾಮೀಣ ಪೊಲೀಸ್ ಠಾಣೆಯ ಸಬ್‍ಇನ್‌ಸ್ಪೆಕ್ಟರ್ ಮುಹಮ್ಮದ್ ಇಸಾಕ್ ಅವರಿಂದ ವರದಿ ಪಡೆದು ಕರ್ತವ್ಯ ಲೋಪ ಎಸಗಿದ ಆರೋಪದ ಅಡಿಯಲ್ಲಿ ಶರಣಪ್ಪ ಹಾಗೂ ಬೀರಪ್ಪ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿದ್ದಾರೆ.

ಅದರಂತೆ ತಾಲ್ಲೂಕಿನ ಮೂರುಮೈಲ್ ಕ್ಯಾಂಪಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಮರಣ ಹೊಂದಿದ ಆರೋಪದ ಸಂಬಂಧ ನಗರ ಪೊಲೀಸ್ ಠಾಣೆಯ ಹೆಡ್‍ಕಾನ್‌ಸ್ಟೆಬಲ್ ಟೋಪಣ್ಣ, ಹೆಡ್‍ಕಾನ್‌ಸ್ಟೆಬಲ್‌ಗಳಾದ ಸುನೀತ ಹಾಗೂ ಸಾಗರ ಅವರನ್ನು ಕರ್ತವ್ಯಲೋಪ ಆರೋಪದ ಅಡಿಯಲ್ಲಿ ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News