ರಾಯಚೂರು| ಅನಧಿಕೃತ ಮರಳು ಮುಟ್ಟುಗೋಲು ಹಾಕಲು ಒತ್ತಾಯ
ರಾಯಚೂರು| ದೇವದುರ್ಗ ತಾಲ್ಲೂಕಿನ ಕರ್ಕಿಹಳ್ಳಿ ಬಳಿ ಕೋಟ್ಯಂತರ ಮೌಲ್ಯದ ಮರಳು ಅನಧಿಕೃತವಾಗಿ ಸಂಗ್ರಹಿಸಿದ್ದು, ಜಿಲ್ಲಾಡಳಿತ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ನಾಯಕ ಮಸ್ಕಿ ತಿಳಿಸಿದರು.
ದೇವದುರ್ಗ ತಾಲ್ಲೂಕಿನ ಮೂರು ಕಡೆ ಹಟ್ಟಿ ಚಿನ್ನದ ಗಣಿ ಕಂಪನಿ ಗಣಿಗಾರಿಕೆ ಮಾಡಲು ಅವಕಾಶ ನೀಡಿದೆ. ಆದರೆ, ಹಟ್ಟಿ ಗಣಿಯವರು ನಾವು ಯಾವುದೇ ರೀತಿಯ ಮರಳು ಗಣಿಗಾರಿಕೆ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಕರ್ಕಿಹಳ್ಳಿ ಬಳಿ ಸರ್ವೆ ನಂಬರ್ 36/1 ರಲ್ಲಿ ಕೋಟ್ಯಂತರ ಮೌಲ್ಯದ ಮರಳು ದಾಸ್ತಾನು ಮಾಡಲಾಗಿದೆ. ಇದು ಯಾರು ಸಂಗ್ರಹಿಸಿದರು ಎಂಬ ಪ್ರಶ್ನೆಗೆ ಸರಿಯಾದ ಉತ್ತರವೇ ಸಿಗುತ್ತಿಲ್ಲ. ಇಲಾಖೆ ಅಧಿಕಾರಿ ಪುಷ್ಪಲತಾ ಯಾವುದೇ ಗಣಿಗಾರಿಕೆ ನಡೆದಿಲ್ಲ ಎಂದು ವರದಿ ಕೊಡುತ್ತಾರೆ. ಈಗ ಅಧಿಕಾರಿಗಳು ಜಮೀನು ಮಾಲೀಕರು ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಮರಳು ಯಾರ್ಡ್ ವಿಚಾರದಲ್ಲಿ ಶ್ರೀನಿವಾಸ್ ಮತ್ತು ವಿನೋದ್ ಕುಮಾರ್ ಎನ್ನುವವರ ನಡುವೆ ಒಪ್ಪಂದ ಪತ್ರ ಕೂಡ ಮಾಡಿಕೊಳ್ಳಲಾಗಿದೆ. ಆದರೆ, ಈ ರೀತಿ ಒಪ್ಪಂದ ಮಾಡಿಕೊಂಡ ಶ್ರೀನಿವಾಸ್ ಯಾರು ಎನ್ನುವ ಮಾಹಿತಿಯೇ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ, ಉಪ ವಿಭಾಗಾಧಿಕಾರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಅಧಿಕಾರಿಗಳು, ಗಣಿ ಕಂಪನಿಯವರು ಸೇರಿಕೊಂಡು ಅಕ್ರಮ ಮರಳು ದಂದೆ ನಡೆಸುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಲೋಕಾಯುಕ್ತರಿಗೆ ದೂರು ದಾಖಲಿಸಲಾಗುವುದು. ಇಲ್ಲವೇ ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಶರಣಗೌಡ ಸುಂಕೇಶ್ವರಹಾಳ, ಆಂಜನೆಯ ನಾಯಕ, ಮಂಜುನಾಥ ಹೇರುಂಡಿ ಉಪಸ್ಥಿತರಿದ್ದರು.