ಡೊಂಗರಾಂಪುರ: ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಡುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ
ರಾಯಚೂರು:ರಾಯಚೂರು ತಾಲೂಕಿನ ಡೊಂಗರಾಂಪುರ (ಡಿ.ರಾಂಪುರ) ಗ್ರಾಮದ ಪರಮೇಶ್ವರ ಬೆಟ್ಟದಲ್ಲಿರುವ ಚಿರತೆ ಹಿಡಿದು ಕಾಡಿಗೆ ಕಳಿಸಬೇಕು ಎಂದು ಒತ್ತಾಯಿಸಿ ಡೊಂಗರಾಂಪುರ ಗ್ರಾಮಸ್ಥರು ನಗರದ ಅರಣ್ಯ ಇಲಾಖೆ ಹಾಗೂ ನಗರದ ಯಕ್ಲಾಸಪುರ ಬಡಾವಣೆಯ ನೂತನ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾತನಾಡಿ, ಪರಮೇಶ್ವರ ಬೆಟ್ಟದಲ್ಲಿ 3 ತಿಂಗಳಿಂದ ಚಿರತೆ ವಾಸ ಮಾಡುತ್ತಿದೆ. ಈಗಾಗಲೇ ನೂರಾರು ನವಿಲು, 20ಕ್ಕೂ ಅಧಿಕ ನಾಯಿ, ಎರಡೂ ಕುರಿಗಳನ್ನು ತಿಂದು ಹಾಕಿದೆ. ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಬೇರೆಕಡೆ ಸಾಗಿಸುವಂತಹ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬೆಟ್ಟದಲ್ಲಿ ಚಿರತೆಗೆ ಆಹಾರದ ಕೊರತೆಯಾಗಿದೆ. ಹಾಗಾಗಿ ಆಹಾರಕ್ಕಾಗಿ ಮನೆಗಳಲ್ಲಿ ಬಂದು ಕುರಿಗಳನ್ನು ತಿಂದಿದೆ. ಮುಂದೆ ಮನುಷ್ಯರ ಸರದಿ ಎನ್ನವಂತಾಗಿದೆ ಎಂದು ಅಳಲು ತೊಡಗಿಕೊಂಡರು.
ಗ್ರಾಮದ ಬೆಟ್ಟಕ್ಕೆ ಹೊಂದಿಕೊಂಡು ಗುಡಿಸಲು ಹಾಕಿ ವಾಸವಾಗಿರುವ ತಾಯಪ್ಪ ಎಂಬವರು ಹೊರಗೆ ಕಟ್ಟಿಹಾಕಿದ್ದ ಎರಡು ಕುರಿಗಳನ್ನು ಚಿರತೆ ಎತ್ತಿಕೊಂಡು ಹೋಗಿ ತಿಂದು ಹಾಕಿದೆ. ಇದರ ಹೆಜ್ಜೆ ಗುರುತುಗಳು, ಕುರುಹುಗಳು ಕಾಣಿಸಿಕೊಂಡಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ದಿನಾಲೂ ನಾಯಿಯನ್ನು ಹಿಡಿದುಕೊಂಡು ಬಂದು ಬೋನಿನಲ್ಲಿ ಬಿಟ್ಟು ಪುನಃ ಹಿಡಿದುಕೊಂಡು ಹೋಗುತ್ತಾರೆ. ಆದರೆ ಚಿರತೆಯನ್ನು ಹಿಡಿಯುವಂತಹ ಪ್ರಯತ್ನ ಮಾಡುತ್ತಿಲ್ಲ. ಸಂಬಂಧಪಟ್ಟ ಮೇಲಾಧಿಕಾರಿಗಳನ್ನು ಕೇಳಿದರೆ ಬೋನುಳಗನ್ನು ಇಟ್ಟಿದ್ದೇವ ಚಿರತೆ ಬೀಳುತ್ತಾ ಇಲ್ಲ. ನಾವು ಏನು ಮಾಡಲಿಕ್ಕೆ ಆಗುತ್ತದೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ಒಂದು ಕಡೆ ಹೊಳೆಯಲ್ಲಿ ಮೊಸಳೆಗಳ ಭಯ, ಇನ್ನೊಂದು ಕಡೆ ಚಿರತೆಯ ಭಯ, ಭಯದ ನೆರಳಲ್ಲೇ ಗ್ರಾಮಸ್ಥರು ಬದುಕುವ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಗ್ರಾಮಗಳಲ್ಲಿ ಚಿರತೆಗಳ ಸಂಚಾರದ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಚಿರತೆಯನ್ನು ಹಿಡಿಯುವ ಕೆಲಸ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿಲ್ಲ. ಕೂಡಲೇ ಜನರ ಜೀವಗಳೊಂದಿಗೆ ಚೆಲ್ಲಾಟವಾಡದೇ ಚಿರತೆಯನ್ನು ಹಿಡಿದು ಕಾಡಿಗೆ ಬೀಡಬೇಕು ಎಂದು ಒತ್ತಾಯಿಸಿದರು.
ಆಂಜನೇಯ, ಕರಿಯಪ್ಪ ನಾಯಕ, ಕೆ. ಗೋವಿಂದ, ಕೆ. ಉರುಕುಂದ, ನರಸಿಂಹ ರೆಡ್ಡಿ, ಪ್ರಶಾಂತ, ಮಾರೆಪ್ಪ, ಶ್ರೀನಿವಾಸ, ಸಣ್ಣ ಅಶೋಕ, ಪಿ.ಶಂಕರ, ನಿಂಗಪ್ಪ, ಪಿ. ಸುಬ್ಬು, ವೆಂಕಟೇಶ ಉಪಸ್ಥಿತರಿದ್ದರು.