ರೈತರ ಬದುಕಿನೊಂದಿಗೆ ಆಟವಾಡದೆ ಬೇಸಿಗೆ ಬೆಳೆಗೆ ನೀರು ಕೊಡಿ : ಮಾಜಿ ಸಚಿವ ವೆಂಕಟರಾವ್ ನಾಡಗೌಡ
ರಾಯಚೂರು: ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತವಾಗಿ ಬೇಸಿಗೆ ಬೆಳೆಗೆ ನೀರು ಕೊಡುವಷ್ಟು ನೀರು ಇದ್ದು, ರೈತರ ಬದುಕಿನೊಂದಿಗೆ ಆಟವಾಡದೆ, ನೀರು ಕೊಡಿ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ವೆಂಕಟರಾವ್ ನಾಡಗೌಡ ಆಗ್ರಹಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಾಶಯದಲ್ಲಿ ನೀರಿನ ಸಂಗ್ರಹದ ಸಾಮರ್ಥ್ಯ ನೋಡಿ ಮಾತನಾಡಿದ್ದೇವೆ, ಈ ವರ್ಷ ಅತಿ ಹೆಚ್ಚು ಮಳೆಯಾಗಿ ಬೆಳೆದ ಬೆಳೆಯು ಕೂಡ ಕೈಗೆ ಬರದಂತಾಗಿದೆ. ಡ್ಯಾಮ್ ನಲ್ಲಿ ನೀರಿದ್ದರೂ ಕೂಡ ಜೂ.6 ರ ಅಂಕಿ ಅಂಶ ತೋರಿಸಿ ನೀರಿಲ್ಲಎಂದು ಹೇಳಿ ರೈತರಲ್ಲಿ ಗೊಂದಲ ಮೂಡಿಸಿ, ಏಳೆಂಟು ತಿಂಗಳುಗಳ ಕಾಲ ಕ್ರಸ್ಟ್ ಗೇಟ್ ಗಳನ್ನು ಕೊಡಿಸಬೇಕೆಂದು ಹೇಳುತ್ತಿದ್ದಾರೆ.
ಡ್ಯಾಮ್ ತಜ್ಞ ಕನ್ನಯ್ಯನಾಯ್ಡು ಅ.27 ರಂದೇ ಬೇಸಿಗೆ ಬೆಳೆಗೆ ನೀರು ಕೊಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೊತೆಗೆ ತುಂಗಭದ್ರಾ ಕ್ರಸ್ಟ್ ಗೇಟ್ ಗಳನ್ನು ಕೂಡಿಸಲಿಕ್ಕೆ 3 ತಿಂಗಳು ಸಾಕು ಎಂದಿದ್ದಾರೆ.
ವಿವಿಧ ರಾಜ್ಯಗಳಿಗೆ ನೀರು ಹಂಚಿಕೆಯ ಲೆಕ್ಕಾಚಾರ ನಮಗೆ ಗೊತ್ತಿಲ್ಲ. ಐಸಿಸಿ ತುಂಗಭದ್ರಾ ಮಂಡಳಿಗೆ ಸಂಬಂಧಿಸಿದ ಆಡಳಿತ ಪಕ್ಷದಲ್ಲಿರುವ ಸಚಿವ ಶಿವರಾಜ ತಂಗಡಗಿ, ಶಾಸಕ ಹಂಪನಗೌಡ ಬಾದರ್ಲಿ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎರಡನೇ ಬೆಳೆಗೆ ನೀರು ಕೊಡಿಸಬೇಕು ಎಂದು ಆಗ್ರಹಿಸಿದರು.
ಬೇಸಿಗೆ ಬೆಳೆಗೆ ನೀರು ಕೊಡುವಷ್ಟು ಜಲಾಶಯದಲ್ಲಿ ನೀರಿದೆ. ಇನ್ನೂ ಕೂಡ ಒಳಹರಿವು ಹೆಚ್ಚಾಗಿ ನೀರು ಬರುವ ಸಾಧ್ಯತೆಗಳಿದ್ದು, ರೈತರ ಹಿತದೃಷ್ಟಿಯಿಂದ ವಿಚಾರ ಮಾಡಿ ಆಡಳಿತ ಪಕ್ಷದ ಶಾಸಕರು, ಸಚಿವರು ನೀರು ಕೊಡಿಸುವ ಕೆಲಸ ಮಾಡಬೇಕು.
ರಾಜಕೀಯ ಉದ್ದೇಶವಿಟ್ಟುಕೊಂಡು ನಾವು ಟೀಕೆ ಮಾಡುತ್ತಿಲ್ಲ. ಎಲ್ಲರೂ ಸೇರಿ ರೈತರಿಗೆ ಅನುಕೂಲ ಮಾಡಬೇಕೆನ್ನುವ ಉದ್ದೇಶ ನಮ್ಮದು ಎಂದು ನಾಡಗೌಡ, ವಿರುಪಾಕ್ಷಪ್ಪ ಸ್ಪಷ್ಟಪಡಿಸಿದರು.
ಶಿವರಾಜ ತಂಗಡಗಿಗೆ ರೈತರ ಮೇಲೆ ಕಾಳಜಿಯಿದ್ದರೆ ಭದ್ರಾದಿಂದ 10 ಟಿಎಂಸಿ ನೀರು ಬಿಡಿಸಿ ಬೇಸಿಗೆ ಬೆಳೆಗೆ ನೀರು ಕೊಟ್ಟು ಅವರ ಹಿತ ಕಾಪಾಡಲಿ, ಅದು ಬಿಟ್ಟು ಬೇಸಿಗೆ ಬೆಳೆಗೆ ಸಂಪೂರ್ಣ ನೀರಿಲ್ಲ. ಕ್ರಸ್ಟ್ ಗೇಟ್ ಕೂಡಿಸಬೇಕೆಂದು ಸಬೂಬು ಹೇಳಬಾರದೆಂದು ನಾಡಗೌಡರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ನಗರ ಘಟಕದ ಅಧ್ಯಕ್ಷ ರವಿಗೌಡ ಪನ್ನೂರು, ನಗರಸಭೆ ಸದಸ್ಯರಾದ ಜಿಲಾನಿಪಾಷಾ, ಚಂದ್ರಶೇಖರ ಮೈಲಾರ, ಮುಖಂಡರಾದ ಜಿ.ಸತ್ಯನಾರಾಯಣ, ಅಶೋಕಗೌಡ ಗದ್ರಟಗಿ, ಅಲ್ಲಮಪ್ರಭು ಪೂಜಾರ್, ಎಸ್.ಪಿ.ಟೇಲರ್, ನಿರುಪಾದೆಪ್ಪ ಸುಕಾಲಪೇಟೆ, ಶಿವನಗೌಡ ಗೊರೇಬಾಳ, ಧರ್ಮನಗೌಡ ಮಲ್ಕಾಪುರ, ಅಜಯ್ ದಾಸರಿ, ಜೀವನ್ ಕುಮಾರ, ಸೈಯಾದ್ ಆಶೀಫ್, ಮೋಸಿನ್ ಸೇರಿದಂತೆ ಹಲವರು ಇದ್ದರು.