ವರದಕ್ಷಿಣೆ ಕಿರುಕುಳ | ಮಹಿಳೆಯ ಕೊಲೆ ಆರೋಪ: ದೂರು ದಾಖಲು
ರಾಯಚೂರು: ವರದಕ್ಷಿಣೆ ಕಿರುಕುಳ ನೀಡಿ ಪತಿಯ ಕುಟುಂಬಸ್ಥರು ಮಹಿಳೆಯ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಸಿಂಧನೂರು ತಾಲೂಕಿನ ಸಿಎಸ್ಎಫ್ ಕ್ಯಾಂಪ್ ನಲ್ಲಿ ನಡೆದಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಚಿರತ್ನಾಳ ಗ್ರಾಮದ ಸಾಯಬಣ್ಣ ಅವರ ಪುತ್ರಿ ಮಾಬಮ್ಮ (26) ಮೃತಪಟ್ಟ ಮಹಿಳೆ. ಈ ಬಗ್ಗೆ ಸಾಯಬಣ್ಣ ನೀಡಿರುವ ದೂರಿನಂತೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?: ಮಾಬಮ್ಮರನ್ನು ಸಿಎಸ್ ಎಫ್ ಕ್ಯಾಂಪಿನ ಹುಸೇನ ಬಾಷಾ ಎನ್ನುವ ವ್ಯಕ್ತಿಯೊಂದಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಆ ವೇಳೆ ನಾಲ್ಕು ತೊಲೆ ಚಿನ್ನಾಭರಣ ನೀಡಿದ್ದೆವು. ಒಂದು ಮತ್ತು ಮೂರು ವರ್ಷದ ಇಬ್ಬರು ಗಂಡು ಮಕ್ಕಳು ಇವೆ. ಮದುವೆಯಾದ ಒಂದೂವರೆ ವರ್ಷ ಚೆನ್ನಾಗಿದ್ದರು. ನಂತರ ಪತಿ ಹುಸೇನ ಬಾಷಾ ನನಗೆ ಮನೆ, ಹೊಲ ಇಲ್ಲ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿ ನಿತ್ಯ ಜಗಳವಾಡಿ ಕಿರುಕುಳ ನೀಡುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಪತಿ ಹುಸೇನ ಬಾಷಾ, ಮೈದುನ ಹಸೇನ ಬಾಷಾ, ಮಾವ ನಬೀಸಾಬ ಹಾಗೂ ಹುಸೇನ ಬಾಷಾನ ಸೋದರ ಮಾವ ಮುರ್ತುಝ ಸಾಬ ಮತ್ತಿತರರು ಸೇರಿ ಮಾಬಮ್ಮಳಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ಸಾಯಬಣ್ಣ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಳಗಾನೂರು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.