ಆತ್ಮ ಸ್ಥೈರ್ಯದಿಂದ ಓದಿದರೆ ಗುರಿ ತಲುಪಲು ಸಾಧ್ಯ: ಶಾಸಕ ಪ್ರದೀಪ್ ಈಶ್ವರ್
ರಾಯಚೂರು: ಜೀವನದಲ್ಲಿ ಏನಾದರೂ ಗುರಿ ಇಟ್ಟುಕೊಂಡು ನಿತಂತರ, ಅಭ್ಯಾಸ ಶ್ರಮ ವಹಿಸಿದರೆ ಯಶಸ್ವಿಯಾಗಬಹುದು. ಬಡತನವೆಂದು ಕೀಳರಿಮೆ ಪಡೆಯದೇ ಛಲದಿಂದ ಮುನ್ನುಗ್ಗಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಲಹೆ ನೀಡಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎನ್.ಎಸ್.ಬೋಸರಾಜು ಫೌಂಡೇಷನ್, ಜ್ಞಾನ ದರ್ಶಿನಿ ಶಿಕ್ಷಣ ಸಂಸ್ಥೆ ಹಾಗೂ ಕನಸು ಕೆಎಎಸ್ ಅಕಾಡೆಮಿ, ಬ್ರೈಟ್ ವೇ ಕಂಪ್ಯೂಟರ್ಸ್‍ಗಳ ಸಂಯುಕ್ತ ಆಶ್ರಯದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರ 79ನೇ ಜನ್ಮದಿನ ನಿಮಿತ್ತ ಐಎಎಸ್, ನೀಟ್, ಕೆಎಎಸ್, ಪಿಎಸ್‍ಐ, ಪಿಡಿಒ, ಎಫ್‍ಡಿಎ, ಎಸ್‍ಡಿಎ, ಪಿಸಿ, ಗ್ರೂಪ್-ಸಿ ಪರೀಕ್ಷೆಗಳ ಸಿದ್ದತೆ ಕುರಿತು ಒಂದು ದಿನದ ಸ್ಪರ್ಧಾತ್ಮಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಕಷ್ಟಪಟ್ಟು ಅಭ್ಯಾಸ ಮಾಡಬಾರದು, ಇಷ್ಟ ಪಟ್ಟು ಮಾಡಬೇಕು, ಐಎಎಸ್, ಕೆಎಎಸ್‍ಗೆ ಸಿದ್ದತೆ ಮಾಡಿಕೊಳ್ಳುವುದಕ್ಕೆ ಮುಂಚೆ ನಾನು ಸಾಧಿಸಲು ಸಾಧ್ಯವೇ, ಆಗುವುದೇ ಎನ್ನುವುದನ್ನು ಬಿಡಬೇಕು. ಕೀಳರಿಮೆ ಪಡೆಯದೇ ಛಲ ಹೊಂದಿರಬೇಕು. ಸಾಧಿಸುವ ಹಟ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ 15 ಗಂಟೆ ಓದಬೇಕು. ನಿದ್ರೆಯನ್ನು ತ್ಯಾಗ ಮಾಡಬೇಕು. ಓದೇ ನಮ್ಮ ಧ್ಯಾನವಾಗಬೇಕು ಎಂದು ಹೇಳಿದರು.
ಗೌರಿಗದ್ದೆಯ ವಿನಯ ಗುರೂಜಿ, ಸೋಮವಾರ ಪೇಟೆ ಹಿರೇಮಠದ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ರಾಜಯೋಗಿನಿ ಸ್ಮಿತಾ ಅಕ್ಕನವರು ಮಾತನಾಡಿದರು.
ಕಾಂಗ್ರೆಸ್ ಯುವ ಮುಖಂಡ ರವಿ ಭೋಸರಾಜು, ಎನ್‍ಎಸ್‍ಬಿ ಫೌಂಡೇಶನ್ ಅಧ್ಯಕ್ಷ ವೆಂಕಟ ಕೃಷ್ಣ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಬಿ.ಶಿಕಾರಿಪುರ, ಶರಣಯ್ಯ ಭಂಡಾರಿ ಮಠ, ಉಪನ್ಯಾಸಕ ಶರಣು ಬಾಗೂರು ಸೇರಿದಂತೆ ಅನೇಕರು ಇದ್ದರು.