ರಾಯಚೂರು | ಸಾರ್ವಜನಿಕ ಸ್ಥಳದಲ್ಲಿ ಸರಕಾರಿ ಅಧಿಕಾರಿಗೆ ನಿಂದನೆ; ದಲಿತ ಸಂಘರ್ಷ ಸಮಿತಿ ಖಂಡನೆ
ರಾಯಚೂರು : ಮಾನ್ವಿಯಲ್ಲಿ ಜೋಳ ಖರೀದಿ ಕೇಂದ್ರವನ್ನು ಏಕಾಏಕಿ ಬಂದ್ ಮಾಡಿರುವುದನ್ನು ಖಂಡಿಸಿ, ನೋಂದಣಿ ಮಾಡಿಕೊಂಡಿರುವ ರೈತರ ಜೋಳವನ್ನು ಖರೀದಿಸುವಂತೆ ನಡೆದ ಹೋರಾಟದಲ್ಲಿ ರೈತರ ಮನವಿ ಪತ್ರವನ್ನು ಸ್ವೀಕರಿಸಲು ಜಿಲ್ಲಾಡಳಿತ ಪ್ರತಿನಿಧಿಯಾಗಿ ಬಂದ ಸರಕಾರಿ ನೌಕರರ ಸಂಫದ ಜಿಲ್ಲಾಧ್ಯಕ್ಷ ಹಾಗೂ ಆಹಾರ ಇಲಾಖೆಯ ನಿರ್ದೇಶಕರಾದ ಕೃಷ್ಣ ಶಾವಂತಗೇರಾ ಅವರನ್ನು ರೈತ ಮುಖಂಡ ಚಾಮರಾಜ ಮಾಲಿ ಪಾಟೀಲ್ ಅವರು ತಳ್ಳಾಟ ನಡೆಸಿರುವುದಲ್ಲದೆ, ಅಸಂಬದ್ಧ ಹೇಳಿಕೆ ನೀಡಿ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಎಸ್. ನರಸಿಂಹಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್. ನರಸಿಂಹಲು, ಜೋಳ ಖರೀದಿಗೆ ಸಂಬಂಧಿಸಿ ಸಿಂಧನೂರುನಲ್ಲಿ ರೈತರು ಹೋರಾಟ ನಡೆಸಿದ್ದರು. ಆದರೆ ತಹಸೀಲ್ದಾರ್ ಮನವಿ ಪತ್ರ ಸ್ವೀಕರಿಸಿದರು. ಅಲ್ಲಿ ರೈತರು ಹಾಗೂ ತಹಸೀಲ್ದಾರ್ ನಡುವೆ ಯಾವುದೇ ಘಟನೆ ನಡೆದಿಲ್ಲ. ಚಾಮರಸ ಮಾಲಿ ಪಾಟೀಲ್ ಅವರು ಒಬ್ಬ ಹಿರಿಯ ರೈತ ಹೋರಾಟಗಾರರಾಗಿ ಅಧಿಕಾರಿಗಳ ಮೇಲೆ ರೀತಿಯ ಅವಾಚ್ಯ ಶಬ್ದವನ್ನು ನಿಂದಿಸಿ ಅಪಮಾನ ಮಾಡಿರುವುದು ತಮ್ಮ ಹೋರಾಟಕ್ಕೆ ಶೋಭೆ ತರುವಂತದಲ್ಲ. ಇದು ಹೋರಾಟದ ಲಕ್ಷಣವಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಪರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಮನವಿ ಪತ್ರ ಸ್ವೀಕರಿಸಲು ಬಂದ ಕೃಷ್ಣ ಶಾವಂತಗೇರಾ ಅವರಿಗೆ ನಿಮಗೆ ಮನವಿ ಪತ್ರ ನೀಡವುದಿಲ್ಲ ಎಂದು ಅವರನ್ನು ವಾಪಸ್ ಕಳುಹಿಸಬೇಕಾಗಿತ್ತು. ಆದರೆ ಅವರನ್ನು ತಳ್ಳುವ ಮೂಲಕ ಅಪಮಾನ ಮಾಡಿರುವುದು ಇದು ನೌಕರ ವರ್ಗಕ್ಕೆ ಹಾಗೂ ಅವರ ಸ್ಥಾನಕ್ಕೆ ಮಾಡಿದ ಅಪಮಾನವಾಗಿದೆ ಎಂದರು.
ಸಾಮಾಜಿಕ ಹೋರಾಟಗಾರ ಶಿವಕುಮಾರ ಮ್ಯಾಗಳ ಮನಿ ಮಾತನಾಡಿ, ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ ನಿನ್ನೆ ನಡೆದ ಜೋಳ ಖರೀದಿ ವಿಚಾರಕ್ಕೆ ಸಂಬಂಧಿಸಿದ ಹೋರಾಟದಲ್ಲಿ ರೈತರ ಮನವಿಯನ್ನು ಸ್ವೀಕರಿಸಲು ಬಂದ ಕೃಷ್ಣ ಶಾವಂತಗೇರಾ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಚಾಮರಾಜ ಮಾಲಿ ಪಾಟೀಲ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೇಮರಾಜ ಆಸ್ಕಿಹಾಳ, ಎಚ್ ಎಂ ಬಾಬು, ಅನಿಲ್, ಹನುಮೇಶ ಆರೋಲಿ, ನರಸಿಂಹಲು ಮರ್ಚಟಹಾಳ್, ರಘು ಯಾದವ ಸೇರಿದಂತೆ ಹಲವರು ಉಪಸ್ಥಿತರಿದ್ದರು.