×
Ad

ಗಡಿಭಾಗದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ಕಲ್ಪಿಸಲಾಗುವುದು : ಸಚಿವ ಶರಣಪ್ರಕಾಶ್‌ ಪಾಟೀಲ್‌

Update: 2025-11-01 21:49 IST

ರಾಯಚೂರು: ಜಿಲ್ಲೆಯ ಗಡಿಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಾನೂನಾತ್ಮಕ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಸರ್ಕಾರ ಮಟ್ಟದಲ್ಲಿ ಅಧಿಸೂಚನೆ ಹೊರಡಿಸುವ ಕುರಿತು ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದರು.

ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಈಗಾಗಲೇ ಗಡಿನಾಡು, ಹೊರನಾಡು ವಿದ್ಯಾರ್ಥಿಗಳಿಗೆ ಮೀಸಲು ಜಾರಿಯಲ್ಲಿದೆ. ತಾಂತ್ರಿಕವಾಗಿ ಸಮಸ್ಯೆ ಇರುವ ಕುರಿತು ಪರಿಶೀಲಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಬೆಳೆಹಾನಿ ಸಮೀಕ್ಷೆ ಪ್ರತಿಶತ 80 ರಷ್ಟು ಪೂರ್ಣಗೊಂಡಿದೆ. ರೈತರ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಅಳವಡಿಕೆ ಪೂರ್ಣಗೊಂಡ ನಂತರ ಮುಂದಿನ ವಾರದಿಂದ ಬೆಳೆ ಪರಿಹಾರ ಬಿಡುಗಡೆ ಪ್ರಾರಂಭಿಸಲಾಗುತ್ತದೆ. ಬೆಳೆ ಪರಿಹಾರಕ್ಕೆ ಅನುದಾನ ಕೊರತೆಯಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ಎನ್‍ಡಿಆರ್ ಎಫ್ ನಿಯಮಗಳೊಂದಿಗೆ ರಾಜ್ಯ ಸರ್ಕಾರವೂ ಬೆಳೆ ನಷ್ಟ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಪ್ರತಿ ಎಕರೆಗೆ 17 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಜಿಲ್ಲೆಯಲ್ಲಿ 52 ಸಾವಿರ ಹೇಕ್ಟರ್ ಬೆಳೆ ಹಾನಿಯಾಗಿದೆ ಎಂದರು.

ತುಂಗಭದ್ರ ಜಲಾಶಯಕ್ಕೆ ಕ್ರಸ್ಟಗೇಟ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ರೈತರ ಎರಡನೆ ಬೆಳೆಗೆ ನೀರು ಹರಿಸಬೇಕೆಂಬ ಬೇಡಿಕೆಯಿದೆ. ಈ ಕುರಿತು ತುಂಗಭದ್ರ ಬೋರ್ಡ್‌ ನಿರ್ಧಾರ ತೆಗೆದುಕೊಳ್ಳಬೇಕಿದೆ. ರೈತರು ಜಲಸಂಪನ್ಮೂಲ ಸಚಿವರಿಗೆ ಭೇಟಿಗೆ ನಿರ್ಧರಿಸಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಹರಿಸುವ ಕುರಿತು ನಿರ್ಧರಿಸಲಾಗುತ್ತದೆ ಎಂದರು.

ಕ್ರಸ್ಟಗೇಟ್ ಅಳವಡಿಕೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಹಣ ನೀಡಲು ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರರು ಕಾಮಗಾರಿ ನಿಧಾನವಾಗಿರುವ ಕುರಿತು ಪರಿಶೀಲಿಸಲಾಗುತ್ತದೆ ಎಂದರು.

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಶಿಕ್ಷಕರ ಕೊರತೆ ನೀಗಿಸಲು 5,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಶೀಘ್ರದಲ್ಲಿ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ. ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಯೋಜನೆ ರೂಪಿಸಲು ಚಿಂತನೆ ನಡೆದಿದೆ ಎಂದರು.

ನವಂಬರ್‌ ಕ್ರಾಂತಿ ಎಂಬುದು ಮಾಧ್ಯಮಗಳ ಸೃಷ್ಟಿ. ಏಲ್ಲಿಯೂ ಸಚಿವರು, ಶಾಸಕರು ಹೇಳಿಲ್ಲ. ಬದಲಾಗಿ ಮಾಧ್ಯಮಗಳು ಕೇಳಿದ್ದರಿಂದ ಅನಿಸಿಕೆ ಹೇಳಿರಬಹುದು. ಯಾವುದೇ ಬದಲಾವಣೆಗಳು ಇಲ್ಲ ಎಂದರು.

ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರನಾಯಕ, ಶಾಸಕ ಬಸನಗೌಡ ದದ್ದಲ, ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ, ಬಸವರಾಜ ಪಾಟೀಲ್ ಇಟಗಿ, ಕೆ.ಶಾಂತಪ್ಪ, ಅಬ್ದುಲ್ ಕರೀಂ, ಜಿಲ್ಲಾಧಿಕಾರಿ ಕೆ.ನಿತೀಶ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ, ಎಸ್‍ಪಿ ಪುಟ್ಟಮಾದಯ್ಯ, ಮಹಾನಗರ ಪಾಲಿಕೆ ಆಯುಕ್ತ ಜೋಬಿನ್ ಮಹೋಪಾತ್ರ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News