×
Ad

ಜಿಲ್ಲೆಯ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಲಿ : ಸಂಸದ ಜಿ.ಕುಮಾರ್ ನಾಯಕ್

Update: 2025-07-15 17:43 IST

ಯಾದಗಿರಿ: ಜಿಲ್ಲೆಯಲ್ಲಿನ ಜನರ ಗಂಭೀರ ಸ್ವರೂಪದ ಸಮಸ್ಯೆಗಳಾದ ಕುಡಿಯುವ ನೀರು, ಅನಕ್ಷರತೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರು ಸೇರ್ಪಡೆ, ಜನರ ವಲಸೆ, ತಾಯಿ- ಶಿಶುಮರಣ ಪ್ರಮಾಣ ತಡೆ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಪ್ರಥಮ ಆದ್ಯತೆ ನೀಡುವಂತೆ ರಾಯಚೂರು ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ಜಿ.ಕುಮಾರ್ ನಾಯಕ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಆದ್ಯತೆ ಮೇಲೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸಿ, ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ರೈತರಲ್ಲಿ ಯೂರಿಯಾ ಹಾಗೂ ಡಿಎಪಿಗೆ ಪರ್ಯಾಯವಾಗಿ ನೀಡಲಾಗುವ ನ್ಯಾನೋ ರಸಗೊಬ್ಬರ ಬಳಕೆ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು. ಸ್ಪ್ರೀಂಕ್ಲರ್, ಮಣ್ಣು ಪರೀಕ್ಷೆ, ಮಣ್ಣು ಪರೀಕ್ಷೆ ಕಾರ್ಡ್ ವಿತರಣೆ ಕುರಿತಂತೆ ಅವಶ್ಯಕ ಅರಿವು ಮೂಡಿಸಲು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಸುಮಾರು 662 ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಆರ್‌ಡಿಪಿಆರ್ ಇಲಾಖೆಯಿಂದ ಸಮೀಕ್ಷೆ ಅನ್ವಯ ಗುರಿ ನೀಡಿದ್ದು, ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಎಸ್‌ಡಿಎಮ್‌ಸಿ ಹಾಗೂ ಗ್ರಾಮಸ್ಥರೊಂದಿಗೆ ಸಮನ್ವಯ ಸಾಧಿಸಿ ಸ್ಯಾಟ್ಸ ಆಧಾರಿತದಲ್ಲಿ ಪತ್ತೆ ಹಚ್ಚಿ ಶಾಲೆಗೆ ಸೇರಿಸಬೇಕು ಎಂದು ಸೂಚಿಸಿದರು.

ಪಶುಪಾಲನೆ ಇಲಾಖೆಯಿಂದ ಸರ್ಕಾರದ ನಿಯಮಾವಳಿಗಳ ಅನ್ವಯ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಂವಿಧಾನ ಬದ್ಧವಾಗಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ವಿಪುಲ ಅವಕಾಶಗಳಿರುವುದರಿಂದ ಅವಶ್ಯಕ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಮಾತನಾಡಿದರು.

ಸುರಪುರ ಶಾಸಕ ರಾಜಾ ವೇಣುಗೋಪಾಲ್ ನಾಯಕ ಅವರು ಜಲಜೀವನ್ ಮಿಷನ್, ಜಲಧಾರೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕೋರಿದರು. ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಬೋಗಿ ಕಾರ್ಖಾನೆಗೆ ನೀರು, ವಿದ್ಯುತ್ ಸಮಸ್ಯೆ, ಜಲಜೀವನ್ ಮಿಷನ್ ಯೋಜನೆಯಡಿಯ ಸಮಸ್ಯೆ ಪರಿಹರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಎಸ್. ಪಿ ಪೃಥ್ವಿಕ್ ಶಂಕರ್, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News