ಪ್ರಧಾನಿ ಮೋದಿ ಅವರು ಅತ್ಯಂತ ದುರ್ಬಲರಾಗಿದ್ದಾರೆ : ಸಚಿವ ಸಂತೋಷ್ ಲಾಡ್
ರಾಯಚೂರು: ಪ್ರಧಾನಿ ಮೋದಿ ಅವರು ಅತ್ಯಂತ ದುರ್ಬಲರಾಗಿದ್ದಾರೆ. 11 ವರ್ಷ ಆಡಳಿತ ನಡೆಸಿದರೂ, ತಮ್ಮನ್ನು ಹೊಗಳಿಸಿಕೊಳ್ಳಲು ಸೆಲೆಬ್ರಿಟಿಗಳಿಂದ ‘ಮೋದಿ ಹೈ ತೋ ಮುಮ್ಕಿನ್ ಹೈ’ ಎಂದು ಹಾಡಿಸುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟೀಕಿಸಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿಯಾಗಿ ಪ್ರತಿ ರಾಜ್ಯದ ಚುನಾವಣೆಗೆ 30-40 ಬಾರಿ ಭೇಟಿ ನೀಡುತ್ತಾರೆ. ಕೆಲಸ ಮಾಡಿದರೆ ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳಬೇಕು, ಜನ ಸಹ ಒಳ್ಳೆಯ ಕೆಲಸಕ್ಕೆ ಮತ ಹಾಕುತ್ತಾರೆ. ಆದರೆ ಈಗ ಚುನಾವಣೆ ಆಯೋಗವೂ ಅವರ ಪರ ಕೆಲಸ ಮಾಡುತ್ತಿದೆ. ಬಿಹಾರ ಚುನಾವಣೆಗೆ ಹಣದ ಹೊಳೆ ಹರಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಟೀಕಿಸಿದರು.
ಆರೆಸ್ಸೆಸ್ ನಿಷೇಧ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಆರೆಸ್ಸೆಸ್ ಬ್ಯಾನ್ ಮಾಡಿದವರೇ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು. ಇತಿಹಾಸವನ್ನು ಬಿಜೆಪಿಯವರು ಗಮನಿಸಲಿ. ಆರೆಸ್ಸೆಸ್ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. ಸೈದ್ಧಾಂತಿಕ ವಿಚಾರವಾಗಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಂದ ಬೆದರಿಕೆ ಕರೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ನಾಯಕರು ಅವರೊಂದಿಗೆ ನಿಂತಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಲಿದೆ. ಅವರಿಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು.
ನವೆಂಬರ್ ಕ್ರಾಂತಿಯ ಕುರಿತು ಪ್ರತಿಕ್ರಿಯಿಸಿದ ಅವರು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒತ್ತಡ ಕೇಂದ್ರದ ಮೇಲಿದೆ. ಅವರ ಓಲೈಕೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಆಂಧ್ರಪ್ರದೇಶಕ್ಕೆ ನೀಡಿದೆ. ದೇಶದಲ್ಲಿ ಐದು ಸೆಮಿ ಕಂಡಕ್ಟರ್ ಗಳಲ್ಲಿ ಪ್ರತಿಯೊಂದು ಯೋಜನೆ 5 ಸಾವಿರ ಕೋಟಿ ಇದೆ. ನಾಲ್ಕು ಗುಜರಾತಿಗೆ ತೆಗೆದುಕೊಂಡು ಹೋಗಿದ್ದಾರೆ. ʼಸಬ್ ಕಾ ಸಾತ್ ಸಬ್ ಕಾ ವಿಕಾಸ್ʼ ಎಲ್ಲಿದೆ ಅದು ಕೇವಲ ಭಾಷಣಕ್ಕೆ ಸೀಮಿತ, ಕೇಳುವರು ಯಾರು ಎಂದು ಪ್ರಶ್ನಿಸಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಒಂದು ರೂಪಾಯಿ ಸೆಸ್‌ನಿಂದ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಉಪಾಧ್ಯಕ್ಷ ಬಶೀರ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.