×
Ad

Raichur | ಬಾಕಿ ಪಾವತಿ ವಿಳಂಬ: ಜಿಪಂ ಸಿಇಒ ಕಾರು ಜಪ್ತಿಗೆ ಮುಂದಾದ ನ್ಯಾಯಾಲಯದ ಸಿಬ್ಬಂದಿ

Update: 2026-02-12 18:20 IST

ರಾಯಚೂರು: 2009-10ನೇ ಸಾಲಿನಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿ ಕಾಮಗಾರಿಗೆ ಸಂಬಂಧಿಸಿದ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಾರನ್ನು ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದ ಘಟನೆ ಗುರುವಾರ ನಡೆದಿದೆ.

ಸಿಂಧನೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ಪ್ರಕೃತಿ ವಿಕೋಪದ ನಂತರ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಆ ಸಂದರ್ಭದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸವ ಅವರು ಕೈಗೊಂಡಿದ್ದರು. ಕಾಮಗಾರಿ ಪೂರ್ಣಗೊಳಿಸಿದ ಬಳಿಕವೂ 2.15 ಲಕ್ಷ ರೂ. ಮೊತ್ತವನ್ನು ಜಿಲ್ಲಾ ಪಂಚಾಯಿತಿಯಿಂದ ಪಾವತಿಸದೆ ಬಾಕಿ ಇಡಲಾಗಿತ್ತು ಎಂದು ತಿಳಿದುಬಂದಿದೆ.

ಹಲವಾರು ಬಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರೂ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಸಿಂಧನೂರು ಹಿರಿಯ ಶ್ರೇಣಿಯ ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಬಾಕಿ ಮೊತ್ತದೊಂದಿಗೆ ಬಡ್ಡಿ ಸೇರಿಸಿ ಒಟ್ಟು ರೂ. 8.22 ಲಕ್ಷ ರೂ. ಪಾವತಿಸಲು ಆದೇಶಿಸಿತ್ತು.

ಆದೇಶ ಜಾರಿಗೆ ಬರದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರ ಕಾರು ಜಪ್ತಿಗೆ ನ್ಯಾಯಾಲಯ ಕ್ರಮ ಕೈಗೊಂಡಿತು. ಇದರಿಂದ ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರು ಕಾರು ಜಪ್ತಿಗೆ ಮುಂದಾದರು. ಬಳಿಕ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ರೂ. 8.22 ಲಕ್ಷ ರೂ. ಮೊತ್ತದ ಚೆಕ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಪರಿಣಾಮ ಜಪ್ತಿ ಕ್ರಮ ಕೈಬಿಡಲಾಯಿತು.

ಬಾಕಿ ಚೆಕ್ ನೀಡಲು ಕಾರ್ಮಿಕರ ಮುಷ್ಕರ ಅಡ್ಡಿ :

ಜಪ್ತಿ ವೇಳೆ ಗುತ್ತಿಗೆದಾರರು ಚೆಕ್‌ ಸ್ವೀಕರಿಸಲು ನಿರಾಕರಿಸಿ, ಡಿಮಾಂಡ್ ಡ್ರಾಫ್ಟ್ (ಡಿಡಿ) ಅಥವಾ ಆರ್‌ಟಿಜಿಎಸ್ ಮೂಲಕ ಪಾವತಿ ಮಾಡುವಂತೆ ಒತ್ತಾಯಿಸಿದರು. ಚೆಕ್ ನೀಡುವುದರಿಂದ ಸಮಸ್ಯೆ ಉಂಟಾಗಬಹುದು ಎಂದು ಅವರು ಮತ್ತು ಅವರ ಪರ ವಕೀಲರು ವಾದಿಸಿದರು. ಆದರೆ, ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಚೆಕ್ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿ ಪರಿಸ್ಥಿತಿಯನ್ನು ಸಮಾಧಾನಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News