×
Ad

ರಾಯಚೂರು | ಅರಣ್ಯ ಇಲಾಖೆಯ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಡಿ.ರಾಂಪೂರ ಗ್ರಾಮಸ್ಥರು

Update: 2025-07-13 12:44 IST

ರಾಯಚೂರು : ರಾಯಚೂರು ತಾಲೂಕಿನ ಡಿ.ರಾಂಪೂರ(ಡೊಂಗರಾಂಪೂರು) ಗ್ರಾಮದ ಪರಮೇಶ್ವರ‌ ಬೆಟ್ಟದ ಮೇಲೆ ಮೇ.20ರಿಂದ ಓಡಾಡಿಕೊಂಡು, ನವಿಲು, ನಾಯಿಗಳನ್ನು ತಿಂದು, ಮೂರು ದಿನ ಹಿಂದಷ್ಟೇ ಮೇಕೆಯನ್ನು ಹೊತ್ತೊಯ್ದು ಭಾರೀ ಆತಂಕ ಮೂಡಿಸಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದಲ್ಲಿ ಮೂವರು ಸಿಬ್ಬಂದಿಯನ್ನು ನೇಮಿಸಿ ಟ್ರ್ಯಾಪ್ ಕ್ಯಾಮೆರಾ ಅಳವಡಿಸಿ, ಎರಡು ಕಡೆ ಬೋನು ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇಂದು(ರವಿವಾರ) ಬೆಳಿಗ್ಗೆ 6:30 ಸುಮಾರಿಗೆ 2 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಯಚೂರು ತಾಲೂಕು ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕ ನೇತೃತ್ವದ ತಂಡ ವಾಹನದಲ್ಲಿ ಚಿರತೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ.

ಡಿ.ರಾಂಪೂರ ಗ್ರಾಮದ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿತ್ತು, ರಾತ್ರಿಯ ವೇಳೆ ನಾಯಿ, ನವಿಲುಗಳನ್ನು ಭೇಟೆಯಾಡಿ ಮೂರು ದಿನ ಹಿಂದೆ ಬೆಟ್ಟದ ಸಮೀಪದ ಗುಡಿಸಲಿಗೆ ನುಗ್ಗಿ ಎರಡು ಮೇಕೆ ಮರಿಗಳನ್ನು ಹೊತ್ತೊಯ್ದಿತ್ತು. ಗುಡಿಸಲಿನಲ್ಲಿಯೇ ಇದ್ದ ತಾಯಪ್ಪ‌ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಮೇ.20ರಂದು ಚಿರತೆ ಕಾಣಿಸಿಕೊಂಡಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಜಾಗೃತಿ ಬ್ಯಾನರ್ ಅಳವಡಿಸಿ ಎಚ್ಚರಿಕೆ ನೀಡಿದ್ದರು. ಅದಾಗ್ಯೂ ಮೂರು ತಿಂಗಳಾಗುತ್ತಿದ್ದರೂ ಚಿರತೆ ಬೋನಿಗೆ ಬೀಳದ ಕಾರಣ ಗ್ರಾಮಸ್ಥರು, ಅರಣ್ಯ ಇಲಾಖೆಯು ನಿಧಾನಗತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯೂ ನಡೆಸಿದ್ದರು.

ಜೂನ್ 7ರಂದು ʼವಾರ್ತಾಭಾರತಿʼ ಪತ್ರಿಕೆಯಲ್ಲಿ ‘ಬೋನಿಗೆ ಬೀಳದ ಚಿರತೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ’ ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.

ಕಾರ್ಯಾಚರಣೆ ತಂಡದಲ್ಲಿ ಉಪವಲಯ ಅರಣ್ಯ ಅಧಿಕಾರಿ ಮೌನೇಶ್, ಗಸ್ತು ಅರಣ್ಯ ಪಾಲಕರಾದ ಬಸವರಾಜ್, ಯಲ್ಲಪ್ಪ , ಭೀಮೇಶ್, ವೀರೇಶ್, ಅರಣ್ಯ ವೀಕ್ಷಕರಾದ ಕನಕಪ್ಪ , ಸಂಗಮೇಶ್, ವಾಹನ ಚಾಲಕರಾದ ವಿಜಯ್ , ನಂದುಕುಮಾರ್, ಮೌನೇಶ್ ಆಚಾರಿ ಮತ್ತು ದಿನಗೂಲಿ ನೌಕರ ಆನಂದ ವಡ್ಡೆಪಲ್ಲಿ, ನರಸಪ್ಪ ಜಂಬಣ್ಣ ಇದ್ದರು.

ಈ ಕುರಿತು ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕ ಮಾತನಾಡಿ, "ಯೋಜನೆ ರೂಪಿಸಿರುವಂತೆ 2 ಬೋನು ಗಳನ್ನು ಅಳವಡಿಸಿ, ಚಿರತೆಯನ್ನು ಯಶಸ್ವಿಯಾಗಿ ಬೋನಿನ ಒಳಗೆ ಬೀಳುವಂತೆ ಉತ್ತಮ ಯೋಜನೆ-ತಂತ್ರಗಳನ್ನು ರೂಪಿಸಲಾಗಿತ್ತು. ಅದರಂತೆಯೇ ಚಿರತೆಯು ಬೋನಿನೊಳಗೆ ಸುಲಭವಾಗಿ ಪ್ರವೇಶಿಸಿ ಸೆರೆಯಾಗಿದೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News