ರಾಯಚೂರು | ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ : ಪತಿಯ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ರಾಯಚೂರು : ಲಿಂಗಸುಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೃತದೇಹ ಮನೆಯಲ್ಲಿ ಸೀರೆಯಿಂದ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಸಮ್ಮ (28) ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆಕೆ ತನ್ನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದು ಆಕೆಯ ಪತಿ ಸಿದ್ದಲಿಂಗಪ್ಪ ಬನ್ನಿಗೋಳ ಎಂಬಾತನೇ ಕೊಲೆ ಮಾಡಿದ್ದಾನೆ ಎಂದು ಮೃತ ಬಸಮ್ಮಳ ತಾಯಿ ಗುರುಲಿಂಗಮ್ಮ ಜಗ್ಲೇರ್ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಚಿಕ್ಕ ಉಪ್ಪೇರಿ ಗ್ರಾಮದ ಸಿದ್ದಲಿಂಗಪ್ಪ ಮತ್ತು ಬಸಮ್ಮ ಅವರ ವಿವಾಹ ನಡೆದಿತ್ತು. ಬಸಮ್ಮಳಿಗೆ ಸಿದ್ದಲಿಂಗಪ್ಪ ಬನ್ನಿಗೋಳ ಪ್ರತಿನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಅಕ್ಟೋಬರ್ 10ರಂದು ಬಸಮ್ಮ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಸಮ್ಮ ತಾಯಿ ಗುರುಲಿಂಗಮ್ಮ ಜಗ್ಲೇರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪಿಎಸ್ಐ ಪುಂಡಲೀಕ ಪಟಾತಾರ್ ತನಿಖೆ ಕೈಗೊಂಡಿದ್ದಾರೆ.