ರಾಯಚೂರು | ಮನೆ ಮಾಲಕರನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ: ನಾಲ್ವರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
ರಾಯಚೂರು: ಮನೆ ಮಾಲಕರನ್ನು ಬೆದರಿಸಿ ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಹೆಚ್ಚುವರಿ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಂಧನೂರು ಪೀಠಾಸೀನ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಆರೋಪಿಗಳಾದ ಆಂದ್ರ ಪ್ರದೇಶ ಮೂಲದ ತೋಟ ರಾಮಕೃಷ್ಣಂ ರಾಜು, ಸದ್ದಲಕುಮಾರ ರಾಜ ಹಾಗೂ ಅರ್ಧಾಣಿ ಲಕ್ಷ್ಮಣ, ಸುಜಾತಗೆ 10 ವರ್ಷ ಕಾರಾಗೃಹ ಶಿಕ್ಷೆ ರೂ.1ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
2022ರ ನವೆಂಬರ್ 8ರಂದು ಬೆಳಗಿನ ಜಾವ ಆರೋಪಿಗಳು ಸಿಂಧನೂರಿನ ಗಾಂಧಿ ನಗರದಲ್ಲಿರುವ ಭಾಸ್ಕರರವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದರು.
ಕಬ್ಬಿಣದ ರಾಡಿನಿಂದ ಬಾಗಿಲು ಒಡೆದು ಒಳನುಗ್ಗಿದ ಆರೋಪಿಗಳು ಮನೆಯಲ್ಲಿ ಮಲಗಿದ್ದ ಕೃಷ್ಣ ಸಾಯಿ ಮತ್ತು ಧನಲಕ್ಷ್ಮಿ ಅವರನ್ನು ಬೆದರಿಸಿ ಕೀ ಪಡೆದು, ಅಲ್ಮಾರಿಯಿಂದ 218 ಗ್ರಾಂ ಬಂಗಾರ ಕದ್ದೊಯ್ದಿದ್ದರು.
ಈ ಕುರಿತು ತುರುವಿಹಾಳ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಅಂದಿನ ಪಿಎಸ್ಐ ಚಂದ್ರಪ್ಪ ಹಾಗೂ ಸಿಪಿಐ ರವಿಕುಮಾರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಶಿಕ್ಷೆ ವಿಧಿಸಿದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಆರ್.ಎ. ಗಡಕರಿ ಸಾಕ್ಷಿ ವಿಚಾರಣೆ ನಡೆಸಿದ್ದು, ಮಂಜುನಾಥ್ ಬೇರಿ ವಾದ ಮಂಡಿಸಿದರು.