×
Ad

ಲಿಂಗಸುಗೂರು ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ : ಸಂಸದ ಜಿ.ಕುಮಾರ ನಾಯಕ

Update: 2025-10-05 17:18 IST

ಲಿಂಗಸುಗೂರು: ಗ್ರಾಮೀಣ ಭಾಗಗಳಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದು ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕರವರು ತಿಳಿಸಿದ್ದಾರೆ.

ಅವರು ಇಂದು ಲಿಂಗಸುಗೂರು ತಾಲೂಕಿನ ಮುದುಗಲ್ ಪುರಸಭೆ ವ್ಯಾಪ್ತಿಯ ಪೈಗಂಬರ್ ನಗರದಿಂದ ಜಕ್ಕೇರುಮಡು ಗ್ರಾಮದವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ)ಯ ಮ್ಯಾಕ್ರೋ ಯೋಜನೆ ಅಡಿಯಲ್ಲಿ, ಸಾರ್ವಜನಿಕ ನಿರ್ಮಾಣ ಇಲಾಖೆಯ ಮೂಲಕ ಕೈಗೊಳ್ಳಲಿರುವ 74.32 ಲಕ್ಷ ರೂ. ಮೊತ್ತದ ಬಿಟಿ ರಸ್ತೆ ಕಾಮಗಾರಿಗೆ ಮಾಜಿ ಶಾಸಕ ಡಿ.ಎಸ್. ಹೂಲಗೇರಿಯವರೊಂದಿಗೆ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಗ್ರಾಮೀಣ ರಸ್ತೆ ಅಭಿವೃದ್ಧಿಯಿಂದ ರೈತರ ಸಂಚಾರ ಹಾಗೂ ಬೆಳೆದ ಬೆಳೆಗಳ ವಹಿವಾಟು ಸುಗಮವಾಗಲಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ “ಕಲ್ಯಾಣ ಪಥ” ಯೋಜನೆಯ ಉದ್ದೇಶವೂ ಇದೆ. ಹಿಂದುಳಿದ ಭಾಗಗಳಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಸುಧಾರಣೆ ತರಬೇಕೆಂಬುದು ಎಂದು ಹೇಳಿದರು.

ಲಿಂಗಸುಗೂರು ಕ್ಷೇತ್ರದ ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ಮಸ್ಕಿ ಶಾಸಕರಾದ ಬಸವನಗೌಡ ತುರುವಿಹಾಳ, ಕಾಂಗ್ರೆಸ್ ಮುಖಂಡರಾದ ಶಿವಶಂಕರ್ ಗೌಡ, ಎಸ್.ಆರ್. ರಸೂಲ್ ಸಾಬ್, ತಮ್ಮಣ್ಣ ಗುತ್ತೇದಾರ್, ಅಜೀಮ್ ಸಾಬ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News