ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಏಮ್ಸ್ ಕೈ ತಪ್ಪಿಸುವ ಹುನ್ನಾರ: ಬಸವರಾಜ ಕಳಸ
ರಾಯಚೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಕೇಂದ್ರದ ತಜ್ಞರ ವರದಿಯ ಆಧಾರದ ಮೇಲೆ ನಿರ್ಧಾರ ವಾಗುತ್ತದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಐಐಟಿ ತಪ್ಪಿಸಿದ ಜೋಶಿ ಏಮ್ಸ್ ತಪ್ಪಿಸಲು ಹುನ್ನಾರ ನಡೆಸಿದ್ದಾರೆ ಎಂದು ರಾಯಚೂರು ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಬಸವರಾಜ ಕಳಸ ಆಕ್ರೋಶ ವ್ಯಕ್ತಪಡಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರಿಗೆ ಆಗಮಿಸಿದಾಗ ಪ್ರಹ್ಲಾದ್ ಜೋಶಿ ಅವರು ಏಮ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಎಡಬಿಡಂಗಿ ಪ್ರದರ್ಶನ ಮಾಡುತ್ತಿದೆ. ಕೇಂದ್ರದ ಯಾವುದೇ ಸಂಸ್ಥೆ ನೀಡಬೆಕಾದರೆ ತಜ್ಞರ ವರದಿ ಆಧಾರದ ಮೇಲೆ ನೀಡುವುದಾದರೆ ಆಂದ್ರಪ್ರದೇಶದ ಮಂಗಳಗಿರಿಗೆ ಏಮ್ಸ್ ಮಂಜೂರು ಮಾಡಿದ್ದು ಯಾವ ವರದಿಯ ಆಧಾರದ ಮೇಲೆ ಎಂದು ಸ್ಪಷ್ಟಪಡಿಸಬೇಕು. ಧಾರವಾಡಕ್ಕೆ ವಿಧಿವಿಜ್ಞಾನ ವಿವಿ ನೀಡಿದ್ದು, ರಾಯಚೂರಿಗೆ ಐಐಐಟಿ ಮಂಜೂರು ಮಾಡಿದ್ದು ಯಾವ ತಜ್ಞರ ವರದಿ ಆಧಾರದ ಮೇಲೆ ಎಂದು ಪ್ರಶ್ನಿಸಿದರು.
ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ ವಿರುದ್ಧ ಏಕವಚನದಲ್ಲಿ ವಾಗ್ದಾಳಿ: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ ವಿಫಲವಾಗಿದ್ದಾರೆ. ತಜ್ಞರ ವರದಿ ಎಂದು ಜಿಲ್ಲೆಯ ನಿಷ್ಕಾಳಜಿಯಿಂದ ಮಾತನಾಡುತ್ತಿದ್ದರೂ ಪಕ್ಕದಲ್ಲಿಯೇ ಇದ್ದ ಶಿವರಾಜ ಪಾಟೀಲ ಪ್ರಶ್ನೆ ಮಾಡಿಲ್ಲ, ಅವರೊಬ್ಬ ಗುಲಾಮ ಶಾಸಕ, ಏಮ್ಸ್ ವಿಚಾರದಲ್ಲಿ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಯವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಏಕ ವಚನದಲ್ಲಿ, ಅಸಾಂವಿಧಾನಿಕ ಪದಗಳಲ್ಲಿ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಕೇಂದ್ರಕ್ಕೆ ನಾಲ್ಕು ಪತ್ರ ಬರೆದಿದೆ ಎಂದು ಸುಮ್ಮನೇ ಕಾಲಹರಣ ಮಾಡದೇ ಕೂಡಲೇ ಸಚಿವ ಸಂಪುಟ ಕರೆದು ತೀರ್ಮಾನ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಾನ್ ವೆಸ್ಲಿ, ಕೆ.ಇ ಕುಮಾರ, ಜೈ ಭೀಮ ವಲ್ಲಭ ಮತ್ತಿತರರು ಉಪಸ್ಥಿತರಿದ್ದರು.