×
Ad

ಕುಂಭಮೇಳ ಕಾಲ್ತುಳಿತ: ಕಳವಳಕಾರಿ ತನಿಖಾ ವರದಿ

Update: 2025-06-12 07:01 IST

PC : PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಚರ್ಚೆಯಲ್ಲಿರುವಾಗಲೇ ಇತ್ತ ಕುಂಭಮೇಳ ಕಾಲ್ತುಳಿತಕ್ಕೆ ಸಂಬಂಧಿಸಿ ಇನ್ನಷ್ಟು ಕಳವಳಕಾರಿ ತನಿಖಾ ವರದಿಗಳು ಹೊರ ಬೀಳುತ್ತಿವೆ. ಬೆಂಗಳೂರು ಕಾಲ್ತುಳಿತಕ್ಕೆ ಸಂಬಂಧಿಸಿ ರಾಜ್ಯದ ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಯ ನಾಯಕರು ಉತ್ತರ ಪ್ರದೇಶದ ಆತಂಕಕಾರಿ ವರದಿಗಳಿಗೆ ಕಣ್ಣಿದ್ದ್ದೂ ಕುರುಡರಂತೆ, ಕಿವಿಯಿದ್ದ್ದೂ ಕಿವುಡರಂತೆ ವರ್ತಿಸುತ್ತಿರುವುದು ವಿಷಾದನೀಯವಾಗಿದೆ. ರಾಜ್ಯದಲ್ಲಿ ನಡೆದಿರುವ ಕಾಲ್ತುಳಿತಕ್ಕೆ ಸಂಬಂಧಿಸಿ ರಾಜ್ಯ ಸರಕಾರ ನೈತಿಕ ಹೊಣೆಯನ್ನು ಹೊತ್ತುಕೊಂಡು ಕ್ಷಮೆಯಾಚಿಸಿದೆ ಮಾತ್ರವಲ್ಲ, ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಪರಿಹಾರ ಘೋಷಣೆ ಮಾಡುವುದರ ಜೊತೆಗೆ ನ್ಯಾಯಾಂಗ ತನಿಖೆಗೂ ಆದೇಶ ನೀಡಿದೆ. ಆದರೆ ಕುಂಭಮೇಳದಲ್ಲಿ ಕಾಲ್ತುಳಿತದ ಹೊಣೆಯನ್ನು ಈವರೆಗೆ ಅಲ್ಲಿನ ಸರಕಾರ ಹೊತ್ತುಕೊಂಡಿಲ್ಲ ಮಾತ್ರವಲ್ಲ, ದುರಂತದಲ್ಲಿ ಮೃತಪಟ್ಟ ಸಂತ್ರಸ್ತರಿಗೆ ಪರಿಹಾರವನ್ನು ನೀಡಲು ಸಂಪೂರ್ಣ ವಿಫಲವಾಗಿದೆ.

ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ನಾಲ್ಕು ತಿಂಗಳು ಕಳೆದಿವೆೆಯಾದರೂ, ಇನ್ನೂ ಪರಿಹಾರ ವಿತರಣೆಯಾಗಿಲ್ಲ ಎನ್ನುವ ಕಾರಣಕ್ಕೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರಕಾರವನ್ನು ಕಳೆದ ವಾರ ತರಾಟೆಗೆ ತೆಗೆದುಕೊಂಡಿತ್ತು. ‘‘ರಾಜ್ಯ ಸರಕಾರದ ವರ್ತನೆಯು ಅತ್ಯಂತ ಅಸಹನೀಯವಾಗಿದೆ. ನಾಗರಿಕರ ಸಂಕಷ್ಟವನ್ನು ಪರಿಹರಿಸುವಲ್ಲಿ ಸರಕಾರ ದಿವ್ಯ ನಿರ್ಲಕ್ಷ್ಯವನ್ನು ತೋರಿದೆ’’ ಎಂದು ಹೈಕೋರ್ಟ್ ಹೇಳಿದೆ. ಇದೇ ಸಂದರ್ಭದಲ್ಲಿ, ಕಾಲ್ತುಳಿತಕ್ಕೆ ಬಲಿಯಾದ ಸಂತ್ರಸ್ತರ ಜೊತೆಗೆ ಸರಕಾರ ವ್ಯವಹರಿಸಿದ ರೀತಿಯ ಬಗ್ಗೆಯೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಾಲ್ತುಳಿತಕ್ಕೆ ಬಲಿಯಾಗಿದ್ದಾಳೆ ಎಂದು ಗುರುತಿಸಿರುವ ಮಹಿಳೆಯ ಮೃತದೇಹವನ್ನು ಸರಕಾರವೇ ಕುಟುಂಬಕ್ಕೆ ಹಸ್ತಾಂತರಿಸಿದ್ದರೂ, ಇದೀಗ ಪರಿಹಾರ ನೀಡಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತ್ತು. ಇನ್ನೊಂದು ಪ್ರಕರಣದಲ್ಲಿ, ಕಾಲ್ತುಳಿತಕ್ಕೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಯಾವುದೇ ವೈದ್ಯಕೀಯ ತಪಾಸಣೆ ಅಥವಾ ಮರಣೋತ್ತರ ಪರೀಕ್ಷೆ ನಡೆಸದೆಯೇ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿತ್ತು. ‘‘ಕಾಲ್ತುಳಿತಕ್ಕೆ ಸಂಬಂಧಿಸಿ ಮೃತರಾದವರ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’’ ಎಂದು ಹೈಕೋರ್ಟ್ ಇದೀಗ ತಾಕೀತು ಮಾಡಿದೆ. ಸತ್ತವರ ಸಂಖ್ಯೆಯನ್ನೇ ಬಹಿರಂಗಗೊಳಿಸಲು ಸರಕಾರ ಹಿಂದೇಟು ಹಾಕುತ್ತಿರುವಾಗ, ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಸಿಗುವುದು ದೂರದ ಮಾತಾಗುತ್ತದೆ.

ಅಲಹಾಬಾದ್ ಹೈಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ‘ಬಿಬಿಸಿ’ಯ ತನಿಖಾ ವರದಿಯೊಂದು, ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆ ಸರಕಾರ ಹೇಳುವಂತೆ 37 ಅಲ್ಲ, 82 ಎಂದು ಹೇಳಿದೆ. ‘ಸಾವನ್ನಪ್ಪಿದವರ ಸಂಖ್ಯೆ ಉತ್ತರ ಪ್ರದೇಶ ಸರಕಾರವು ಬಿಡುಗಡೆಗೊಳಿಸಿದ ಅಂಕಿಅಂಶಗಳಿಗಿಂತ ಗಣನೀಯವಾಗಿ ಹೆಚ್ಚಿದೆ. ನಮ್ಮ ವರದಿಗಾರರು 11 ರಾಜ್ಯಗಳ 50ಕ್ಕೂ ಅಧಿಕ ಜಿಲ್ಲೆಗಳಲ್ಲಿಯ 100ಕ್ಕೂ ಅಧಿಕ ಕುಟುಂಬಗಳನ್ನು ಸಂಪರ್ಕಿಸಿದ್ದು, ಅವರೆಲ್ಲ ತಮ್ಮ ಪ್ರೀತಿ ಪಾತ್ರರು ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ’’ ಎಂದು ವಿಶೇಷ ವರದಿ ಹೇಳಿಕೊಂಡಿದೆ. ಉತ್ತರ ಪ್ರದೇಶ ಸರಕಾರವು 36 ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಅಥವಾ ಚೆಕ್‌ಗಳ ಮೂಲಕ 25 ಲಕ್ಷ ರೂ. ಪರಿಹಾರವನ್ನು ನೀಡಿದ್ದು, ಹೆಚ್ಚುವರಿಯಾಗಿ 26 ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ನಗದನ್ನು ವಿತರಿಸಿತ್ತು ಎನ್ನುವುದನ್ನು ಬಿಬಿಸಿ ಬಹಿರಂಗಪಡಿಸಿದೆ. ವಿಪರ್ಯಾಸವೆಂದರೆ, ಐದು ಲಕ್ಷ ರೂ. ಪರಿಹಾರವನ್ನು ಪಡೆದ 26 ಕುಟುಂಬಗಳ ಸಂತ್ರಸ್ತರನ್ನು ಕಾಲ್ತುಳಿತದಲ್ಲಿ ಅಧಿಕೃತವಾಗಿ ಮೃತಪಟ್ಟವರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಒಂದು ರೀತಿಯಲ್ಲಿ ಅಲ್ಪ ಹಣದ ಮೂಲಕ ಕುಟುಂಬದ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಸರಕಾರ ಮಾಡಿದೆ. ‘ಸಾವುಗಳು ಕಾಲ್ತುಳಿತದಿಂದಲ್ಲ, ಹಠಾತ್ ಅನಾರೋಗ್ಯದಿಂದ ಸಂಭವಿಸಿವೆ ಎಂದು ಹೇಳುವ ದಾಖಲೆಗಳಿಗೆ ಸಹಿ ಹಾಕುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು’ ಎಂದು ಹಲವು ಕುಟುಂಬಗಳು ಬಿಬಿಸಿ ವರದಿಗಾರರೊಂದಿಗೆ ಹೇಳಿಕೊಂಡಿವೆ. ಸರಕಾರ ಕಾಲ್ತುಳಿತದಿಂದ ಸಂಭವಿಸಿದ ಸಾವುನೋವುಗಳ ವಿವರಗಳನ್ನು ಕಲೆಹಾಕಲು ತನಿಖೆ ನಡೆಸುವ ಬದಲು, ಪೊಲೀಸರ ಮೂಲಕ ಸಾವುನೋವುಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದು ಬಿಬಿಸಿ ತನಿಖಾ ವರದಿಯಿಂದ ಬಹಿರಂಗವಾಗಿದೆ. ಕಾಲ್ತುಳಿತದಲ್ಲಿ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ಎನ್. ಗೋವಿಂದಾಚಾರ್ಯರ ಕಿರಿಯ ಸೋದರ ಕೆ. ಎನ್. ವಾಸುದೇವಾಚಾರ್ಯ ಅವರು ಮೃತಪಟ್ಟಿದ್ದು, ಆರಂಭದಲ್ಲಿ ಇದನ್ನು ಅನಾಮಧೇಯ ಮೃತದೇಹವೆಂದು ಗುರುತಿಸಲಾಗಿತ್ತು. ಆದರೆ ಬಿಬಿಸಿಯು ಈ ಮೃತದೇಹವನ್ನು ಗುರುತಿಸಿದೆ. ಈ ಪ್ರಕರಣದಲ್ಲಿ ಸರಕಾರ ಈವರೆಗೆ ಪರಿಹಾರವನ್ನು ಬಿಡುಗಡೆ ಮಾಡಿಲ್ಲ ಎಂದು ವರದಿ ಹೇಳುತ್ತಿದೆ. ಬಿಜೆಪಿ ನಾಯಕನೊಬ್ಬನ ಕುಟುಂಬದ ಸದಸ್ಯನ ಗತಿಯೇ ಹೀಗಾದ ಮೇಲೆ, ಉಳಿದ ಜನಸಾಮಾನ್ಯರ ಗತಿಯೇನಾಗಿರಬಹುದು?

ಅಧಿಕೃತವಾಗಿ ವಿಧಾನಸಭೆಯಲ್ಲಿ ಘೋಷಿಸಿದ ಅಂಕಿಗಳು ತಪ್ಪು ಎನ್ನುವುದನ್ನು ಉತ್ತರ ಪ್ರದೇಶ ಸರಕಾರ ಪರೋಕ್ಷವಾಗಿ ಈಗಾಗಲೇ ಒಪ್ಪಿಕೊಂಡಿದೆ. ಪರಿಹಾರ ನೀಡುವಿಕೆಯಲ್ಲಾಗಿರುವ ಗೊಂದಲಗಳೇ ಎಲ್ಲವನ್ನು ವಿವರಿಸುತ್ತದೆ. ದುರಂತದಲ್ಲಿ ನೂರಕ್ಕೂ ಅಧಿಕ ಸಾವುಗಳು ಸಂಭವಿಸಿವೆ ಎಂದು ಹೇಳಲಾಗುತ್ತದೆಯಾದರೂ, ಅಧಿಕೃತವಾಗಿ ಮೃತದೇಹಗಳು ಪತ್ತೆಯಾಗದೇ ಈ ಆರೋಪವನ್ನು ಒಪ್ಪಲಾಗುವುದಿಲ್ಲ. ಕನಿಷ್ಠ, ತಮ್ಮ ಕುಟುಂಬದ ಸದಸ್ಯ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾನೆ ಎಂದು ಯಾವುದೇ ಕುಟುಂಬಗಳು ಆರೋಪಿಸುತ್ತಿದೆಯಾದರೆ, ಅದನ್ನು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ಇದೇ ಸಂದರ್ಭದಲ್ಲಿ 900ಕ್ಕೂ ಅಧಿಕ ಭಕ್ತರು ನಾಪತ್ತೆಯಾಗಿದ್ದಾರೆ. ಇವರು ಏನಾದರು? ಎನ್ನುವುದು ಕೂಡ ತನಿಖೆಗೆ ಅರ್ಹವಾಗಿದೆ. ಕಾಲ್ತುಳಿತದ ಸಂದರ್ಭದಲ್ಲಿ ಪತ್ತೆಯಾಗಿರುವ ಅನಾಮಧೇಯ ಮೃತದೇಹಗಳನ್ನು ಗಂಗಾನದಿಗೆ ಎಸೆಯಲಾಗಿದೆ ಎನ್ನುವ ಆರೋಪದ ಬಗ್ಗೆಯೂ ತನಿಖೆ ನಡೆಯುವ ಅಗತ್ಯವಿದೆ. ಪ್ರಯಾಗರಾಜ್ ಕುಂಭಮೇಳವು ಐತಿಹಾಸಿಕ ಸಮ್ಮೇಳನವಾಗಿತ್ತು. ಇಲ್ಲಿ ಆಡಳಿತ ವೈಫಲ್ಯಕ್ಕೆ ಬಲಿಯಾದವರೆಲ್ಲರೂ ಹಿಂದೂ ಯಾತ್ರಿಕರು. ಸರಕಾರ ಇಲ್ಲಿ ಸಂಭವಿಸಿದ ದುರಂತವನ್ನು ಮುಚ್ಚಿ ಹಾಕುತ್ತಿರುವುದರಿಂದಾಗಿ ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಯೊಂದು ಕುಂಭಮೇಳದ ಕಾಲ್ತುಳಿತದ ಬಗ್ಗೆ ನಡೆಯಬೇಕಾಗಿದೆ. ನಿಜಕ್ಕೂ ಕಾಲ್ತುಳಿತದಲ್ಲಿ ಸಂಭವಿಸಿದ ಸಾವುಗಳೆಷ್ಟು, ಎಷ್ಟು ಜನರಿಗೆ ಪರಿಹಾರ ದೊರಕಿದೆ, ಈ ದುರಂತಕ್ಕೆ ಕಾರಣವೇನು ಎನ್ನುವ ಮೂರು ಮಹತ್ವದ ಪ್ರಶ್ನೆಗೆ ತನಿಖೆ ಉತ್ತರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ಕರ್ನಾಟಕ ಸರಕಾರದ ತೆಗೆದುಕೊಂಡ ಕ್ರಮಗಳು ಮಾದರಿಯಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News