×
Ad

ಎರಡನೇ ಏಕದಿನ: ಅಫ್ಘಾನಿಸ್ತಾನ ವಿರುದ್ಧ ಕೊನೆಯ ಓವರ್ ನಲ್ಲಿ ಪಾಕಿಸ್ತಾನಕ್ಕೆ 1 ವಿಕೆಟ್ ಜಯ

Update: 2023-08-25 12:27 IST

 ಗೆಲುವಿನ ಸಂಭ್ರಮದಲ್ಲಿ ನಸೀಂ ಶಾ ಹಾಗೂ ರವೂಫ್, Image credit: X/@TheRealPCBMedia

ಹೊಸದಿಲ್ಲಿ: ಆರಂಭಿಕ ಬ್ಯಾಟರ್ ಇಮಾಮ್ ವುಲ್-ಹಕ್(91 ರನ್), ನಾಯಕ ಬಾಬರ್ ಅಝಮ್(53 ರನ್) ಹಾಗೂ ಶಾದಾಬ್ ಖಾನ್ ಅವರ 48 ರನ್ ಗಳ  ಮಹತ್ವದ ಕೊಡುಗೆಯ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ಥ್ರಿಲ್ಲರ್ ನಲ್ಲಿ 1 ವಿಕೆಟ್ ಅಂತರದಿಂದ ಜಯಶಾಲಿಯಾಯಿತು. ಅಫ್ಘಾನ್ ಬ್ಯಾಟರ್ ರಹಮನುಲ್ಲಾ ಗುರ್ಬಾಝ್ ಅವರ ಶತಕ(151 ರನ್, 151 ಎಸೆತ)ವ್ಯರ್ಥವಾಯಿತು.

ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 602 ರನ್ ಗಳಿಸಿದ್ದವು. ಇದು ಪಾಕ್ ಹಾಗೂ ಅಫ್ಗಾನ್ ನಡುವಿನ ಪಂದ್ಯದಲ್ಲಿ ದಾಖಲಾದ ಗರಿಷ್ಠ ಸ್ಕೋರಾಗಿದೆ. ಈ ಗೆಲುವಿನ ಮೂಲಕ ಪಾಕ್ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ಗುರ್ಬಾಝ್ ಅವರ ಅದ್ಭುತ 151 ರನ್ನುಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತು.ಇದು ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ ಗಳಿಸಿದ ಗರಿಷ್ಠ ಮೊತ್ತವಾಗಿತ್ತು.

14 ಬೌಂಡರಿಗಳು ಹಾಗೂ ಮೂರು ಸಿಕ್ಸರ್ ಗಳನ್ನು ಸಿಡಿಸಿದ ಗುರ್ಬಾಝ್ ಅವರು ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಇಬ್ರಾಹಿಂ ಝದ್ರಾನ್ (80 ರನ್) ಜೊತೆಗೂಡಿ ಮೊದಲ ವಿಕೆಟ್ ಗೆ 227 ರನ್ ಗಳನ್ನು ಸೇರಿಸಿದರು.

ಗುರ್ಬಾಝ್ ಅವರು ಪಾಕಿಸ್ತಾನದ ವಿರುದ್ಧ ಅತ್ಯಧಿಕ ಸ್ಕೋರ್ ಗಳಿಸಿದ ಹಾಗೂ ಶತಕ ಗಳಿಸಿದ ಅಫ್ಘಾನಿಸ್ತಾನದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಹಶ್ಮತುಲ್ಲಾ ಶಾಹಿದಿ ( ಅಜೇಯ 97)ಅಫ್ಗಾನ್ ಪರ ಗರಿಷ್ಠ ಸ್ಕೋರ್ ಗಳಿಸಿದ್ದರು.

ಅಫ್ಘಾನ್ ಇನಿಂಗ್ಸ್ ಗೆ ಪ್ರತ್ಯುತ್ತರವಾಗಿ ಪಾಕಿಸ್ತಾನವು ಒಂದು ಹಂತದಲ್ಲಿ ಇಮಾಮ್-ಉಲ್-ಹಕ್ (91) ಮತ್ತು ಬಾಬರ್ ಅಝಮ್ (53) ನಡುವಿನ ಎರಡನೇ ವಿಕೆಟ್ ಗೆ 118 ರನ್ ಗಳ ಜೊತೆಯಾಟದ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು.

ಆದಾಗ್ಯೂ, ಪಾಕಿಸ್ತಾನವು 41 ರನ್ ಗಳಿಗೆ ಐದು ವಿಕೆಟ್ ಗಳನ್ನು ಕಳೆದುಕೊಂಡು ಕುಸಿತ ಕಂಡಿತು. ಶಾದಾಬ್ ಖಾನ್ ಹಾಗೂ ಇಫ್ತಿಕರ್ ಅಹ್ಮದ್ (17 ರನ್) ತಂಡವನ್ನು ಆಧರಿಸಿದರೂ ವಿಕೆಟಟ್ ಗಳು  ಉರುಳುತ್ತಲೇ ಇದ್ದವು, ಅಫ್ಘಾನಿಸ್ತಾನ ಗೆಲುವಿನ ಸನಿಹವಿತ್ತು.

12 ಎಸೆತಗಳಲ್ಲಿ 27 ರನ್ ಗಳ ಅಗತ್ಯವಿದ್ದಾಗ ಶಾದಾಬ್ 49ನೇ ಓವರ್ ನ  ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಶಾದಾಬ್ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ನಾನ್ ಸ್ಟ್ರೈಕರ್  ತುದಿಯಲ್ಲಿ ರನೌಟ್ ಆದರು. ನಸೀಂ ಶಾ(ಔಟಾಗದೆ 10) ಬೌಂಡರಿ ಗಳಿಸಿ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಪಾಕ್ ಗೆ ರೋಚಕ ಜಯ ತಂದುಕೊಟ್ಟರು. ಪಾಕ್ 49.5 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News