×
Ad

ಮಂಗಳೂರು | ಫೆ.14ರಿಂದ 16ರ ವರೆಗೆ ಡರ್ಟ್ ಪ್ರಿ-8 ಕಾರ್ ರೇಸ್, ಆಟೊ ಎಕ್ಸ್‌ಪೊ

Update: 2025-02-13 22:53 IST

Photo : instagram

ಮಂಗಳೂರು: ಮಂಗಳೂರು ಮೋಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಅಬ್ಲೇಝ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದಲ್ಲಿ ಫೆ.14ರಿಂದ 16ರ ವರೆಗೆ ಡರ್ಟ್ ಪ್ರಿ 8 ಕಾರ್ ರೇಸ್ ಮತ್ತು ಆಟೊ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಅಸೋಸಿಯೇಶನ್ ಅಧ್ಯಕ್ಷ ಸುಧೀರ್ ಬಿ. ಕೆ. ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ ರೇಸ್ ಹಲವು ವಿಭಾಗಗಳಲ್ಲಿ ನಡೆಯಲಿದ್ದು 150ರಷ್ಟು ಮಂದಿ ರಾಷ್ಟ್ರದ ವಿವಿಧೆಡೆಯಿಂದ ಭಾಗವಹಿಸಲಿದ್ದಾರೆ ಎಂದರು.

ಫೆ.14ರಂದು ಫಿಝಾ ಬೈ ನೆಕ್ಸಸ್ ಮಾಲ್ ನಲ್ಲಿ ಸಂಜೆ 3:30ಕ್ಕೆ ಉದ್ಘಾಟನೆ ನಡೆಯಲಿದೆ. ಈ ಸಂದರ್ಭದಲ್ಲಿ ತಂಡಗಳ ಪರಿಚಯ ಮಾಡಲಾಗುವುದು ಹಾಗೂ ರೇಸ್ ಕಾರು ಮತ್ತು ಬೈಕ್ ಗಳ ಪ್ರದರ್ಶನ ನಡೆಯುವುದು. ಕಾರ್ಯಕ್ರಮದಲ್ಲಿ ಮೋಟರ್ ಸ್ಪೋರ್ಟ್ಸ್ ತಜ್ಞರು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಫೆ.15ರಂದು ನಗರದ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಆಟೊ ಎಕ್ಸ್‌ಪೊ ಹಾಗೂ ತಜ್ಞರಿಂದ ರೇಸ್ ತರಬೇತಿ ಕಾರ್ಯಾಗಾರ ನಡೆಯಲಿದೆ.

ಫೆ.16ರಂದು ಬೆಳಗ್ಗೆ 8ರಿಂದ ಕಾರುಗಳ ಡರ್ಟ್ ಟ್ರ್ಯಾಕ್ ರೇಸ್ ನಡೆಯಲಿದ್ದು, 3000 ಸಿಸಿ, 1600 ಸಿಸಿ, 1400 ಸಿಸಿ ಮತ್ತು 800 ಸಿಸಿ ಸೇರಿದಂತೆ 20ಕ್ಕೂ ಅಧಿಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಮೇಘಾಲಯ, ಬೆಂಗಳೂರು, ಗೋವಾ, ಮೈಸೂರು ಮತ್ತು ಚಿಕ್ಕಮಗಳೂರು ಸೇರಿದಂತೆ ದೇಶದ ವಿವಿಧೆಡೆಗಳಿಂದ ಕಾರ್ ರೇಸ್ ಪ್ರಿಯರು ಆಗಮಿಸುವರು ಎಂದು ಆಟೊ ಬ್ಲೇಝ್‌ನ ಧನುಶ್ ತಿಳಿಸಿದರು.

1.5 ಕಿ.ಮೀ ಉದ್ದದ ಲೂಪ್ ಟ್ರ್ಯಾಕ್ ಅನ್ನು ಇದಕ್ಕಾಗಿಯೇ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ರೇಸ್ ನಡೆಯಲಿದೆ. ಅತಿ ವೇಗದ ಚಾಲಕ, ಉತ್ತಮ ಚಾಲಕ ಪ್ರಶಸ್ತಿಗಳೊಂದಿಗೆ ಟೀಂ ಟ್ರೋಫಿ, ಕರಾವಳಿಯ ಉತ್ತಮ ಚಾಲಕರಿಗಾಗಿ ಕಿಂಗ್ ಆಫ್ ಕೋಸ್ಟ್ ಮತ್ತಿತರ ಬಹುಮಾನಗಳನ್ನು ನೀಡಲಾಗುವುದು.

ಮಂಗಳೂರಿನ ರೇಸರ್ ಆರೂರು ವಿಕ್ರಂ ರಾವ್, ಆಟೊ ಬ್ಲೇಝ್‌ನ ಪೂರ್ಣಚಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News