ಯುಎಸ್ ಓಪನ್ ಟೆನಿಸ್ ಪಂದ್ಯಾವಳಿ : ಸಿಂಗಲ್ಸ್ ವಿಜೇತರಿಗೆ ದಾಖಲೆಯ 43 ಕೋಟಿ ರೂ. ಬಹುಮಾನ
Photo Credit : usopen.org
ನ್ಯೂಯಾರ್ಕ್, ಆ. 7: ಈ ಋತುವಿನ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಬಹುಮಾನ ಮೊತ್ತವನ್ನು 85 ಮಿಲಿಯ ಡಾಲರ್ (ಸುಮಾರು 743 ಕೋಟಿ ರೂಪಾಯಿ)ಗೆ ಹೆಚ್ಚಿಸಲಾಗಿದೆ. ಮಹಿಳೆಯರು ಮತ್ತು ಪುರುಷರ ಸಿಂಗಲ್ಸ್ ವಿಜೇತರು ದಾಖಲೆಯ ತಲಾ 5 ಮಿಲಿಯ ಡಾಲರ್ (ಸುಮಾರು 43 ಕೋಟಿ ರೂಪಾಯಿ) ನಗದು ಬಹುಮಾನ ಪಡೆಯಲಿದ್ದಾರೆ.
ಈ ಬಾರಿ ಆಟಗಾರರು ಒಟ್ಟಾರೆಯಾಗಿ ಬಹುಮಾನ ರೂಪದಲ್ಲಿ 20 ಶೇಕಡ ಹೆಚ್ಚಿನ ನಗದು ಮೊತ್ತವನ್ನು ಪಡೆಯಲಿದ್ದಾರೆ.
ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಯ ಬಹುಮಾನ ಮೊತ್ತವನ್ನು ಯುಎಸ್ ಟೆನಿಸ್ ಅಸೋಸಿಯೇಶನ್ ಬುಧವಾರ ಘೋಷಿಸಿದೆ. ಪಂದ್ಯಾವಳಿಯು ಆಗಸ್ಟ್ 24ರಂದು ಆರಂಭಗೊಳ್ಳಲಿದೆ. ಈ ಬಾರಿ ಪಂದ್ಯಾವಳಿಯಲ್ಲಿ ಹೊಸದಾಗಿ ಮಿಶ್ರ ಡಬಲ್ಸ್ ಸ್ಪರ್ಧೆಯನ್ನು ಸೇರಿಸಲಾಗಿದೆ. ಸಿಂಗಲ್ಸ್ ಸ್ಪರ್ಧೆಗಳು ಮೊದಲ ಬಾರಿಗೆ ರವಿವಾರ (ಆಗಸ್ಟ್ 24) ಆರಂಭಗೊಳ್ಳಲಿದೆ.
ಆಟಗಾರರಿಗೆ ಹೆಚ್ಚಿನ ಬಹುಮಾನ ಮೊತ್ತ ನೀಡಬೇಕು ಎಂದು ಒತ್ತಾಯಿಸಿ ನೊವಾಕ್ ಜೊಕೊವಿಕ್, ಕೋಕೋ ಗೌಫ್, ಅರೈನಾ ಸಬಲೆಂಕ ಮತ್ತು ಜನ್ನಿಕ್ ಸಿನ್ನರ್ ಸೇರಿದಂತೆ 20 ಆಟಗಾರರು ಮಾರ್ಚ್‌ನಲ್ಲಿ ನಾಲ್ಕು ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಗಳಾದ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್‌ನ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದರು.