×
Ad

ಏಕದಿನ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ರೋಹಿತ್

ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಏರಿಕೆ

Update: 2025-12-03 21:51 IST

 ರೋಹಿತ್ ಶರ್ಮಾ | Photo Credit : PTI 

ರಾಯ್ಪುರ, ಡಿ. 3: ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ಸ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ತನ್ನದೇ ತಂಡದ ರೋಹಿತ್ ಶರ್ಮಾರನ್ನು ಸಮೀಪಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತನ್ನ 52ನೇ ಏಕದಿನ ಶತಕವನ್ನು ಬಾರಿಸಿದ ಬಳಿಕ ಅವರು ರೋಹಿತ್ ಶರ್ಮಾಗಿಂತ ಕೇವಲ 32 ರೇಟಿಂಗ್ ಅಂಕಗಳಷ್ಟು ಹಿಂದಿದ್ದಾರೆ. ರವಿವಾರ ನಡೆದ ಪಂದ್ಯದಲ್ಲಿ ಅವರು 120 ಎಸೆತಗಳಲ್ಲಿ 135 ರನ್‌ಗಳನ್ನು ಸಿಡಿಸಿದ್ದರು.

ಐಸಿಸಿ ಪುರುಷರ ಬ್ಯಾಟರ್‌ಗಳ ರ್ಯಾಂಕಿಂಗ್ಸ್‌ ನಲ್ಲಿ 37 ವರ್ಷದ ಕೊಹ್ಲಿ ಈಗ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅವರು 751 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಅಗ್ರ ಸ್ಥಾನದಲ್ಲಿರುವ ರೋಹಿತ್ ಶರ್ಮಾ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ. ನ್ಯೂಝಿಲ್ಯಾಂಡ್‌ ನ ಡ್ಯಾರಿಲ್ ಮಿಚೆಲ್ ಎರಡನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನದ ಇಬ್ರಾಹೀಮ್ ಝದ್ರಾನ್ ಮೂರನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ತನ್ನದೇ ತಂಡದ ಶುಭಮನ್ ಗಿಲ್‌ರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನ ಸಂಪಾದಿಸಿದ್ದಾರೆ. ಕೊಹ್ಲಿ ಹಿಂದೆ ಮೂರು ವರ್ಷಗಳ ಕಾಲ ರ್ಯಾಂಕಿಂಗ್ಸ್‌ನಲ್ಲಿ ಅಗ್ರ ಸ್ಥಾನ ಹೊಂದಿದ್ದರು. ಬಳಿಕ, 2021ರಲ್ಲಿ ಪಾಕಿಸ್ತಾನದ ಬಾಬರ್ ಆಝಮ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ವಶಪಡಿಸಿಕೊಂಡಿದ್ದರು.

ಬೌಲರ್‌ಗಳ ವಿಭಾಗದಲ್ಲಿ ಭಾರತದದ ಕುಲದೀಪ್ ಯಾದವ್ ಒಂದು ಸ್ಥಾನ ಮೇಲೇರಿ ಆರನೇ ಸ್ಥಾನ ಸಂಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News