ಟೀಮ್ ಇಂಡಿಯಾದ 2026ರ ಟಿ20 ವಿಶ್ವಕಪ್ ಜೆರ್ಸಿ ಅನಾವರಣ
Photo Credit : @Crex_live
ಹೊಸದಿಲ್ಲಿ, ಡಿ.3: ದಕ್ಷಿಣ ಆಫ್ರಿಕಾ ವಿರುದ್ಧ ರಾಯ್ಪುರದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ಇನಿಂಗ್ಸ್ ವಿರಾಮದ ವೇಳೆ 2026ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಮ್ ಇಂಡಿಯಾವು ತನ್ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತು.
ಎರಡನೇ ಏಕದಿನ ನಡೆಯುತ್ತಿದ್ದಾಗ ರೋಹಿತ್ ಶರ್ಮಾ ಹಾಗೂ ತಿಲಕ್ ವರ್ಮಾ ಅವರು ಅಡಿಡಸ್ ಕಂಪೆನಿಯ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉಪಸ್ಥಿತರಿದ್ದರು.
2024ರ ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕತ್ವವಹಿಸಿರುವ ರೋಹಿತ್ 2026ರ ಆವೃತ್ತಿಯ ವಿಶ್ವಕಪ್‌ನ ಬ್ರ್ಯಾಂಡ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
‘‘2007ರಲ್ಲಿ ಟಿ-20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ನಮಗೆ ಮತ್ತೊಂದು ವಿಶ್ವಕಪ್ ಗೆಲ್ಲಲು 15 ವರ್ಷಗಳು ಬೇಕಾದವು. ಈ ಬಾರಿ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯಲಿದೆ. ನನ್ನ ಹಾರೈಕೆ ಸದಾ ತಂಡದ ಮೇಲಿರಲಿದೆ. ಇದೊಂದು ಕುತೂಹಲಕಾರಿ ಪಂದ್ಯಾವಳಿಯಾಗಿದೆ. ಪ್ರತಿಯೊಬ್ಬರು ತಂಡಕ್ಕೆ ಬೆಂಬಲಿಸುವ ವಿಶ್ವಾಸವಿದೆ’’ ಎಂದು ಟಿ-20 ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ರೋಹಿತ್ ಹೇಳಿದ್ದಾರೆ.
ಮುಂಬರುವ ಟಿ-20 ವಿಶ್ವಕಪ್ ಟೂರ್ನಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದ್ದು, ಫೆಬ್ರವರಿ 7ರಂದು ಆರಂಭವಾಗಲಿದೆ. ಮಾರ್ಚ್ 8ರಂದು ಫೈನಲ್ ಪಂದ್ಯ ನಿಗದಿಯಾಗಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಮುಂಬೈನಲ್ಲಿ ಫೆಬ್ರವರಿ 7ರಂದು ಅಮೆರಿಕ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
*2026ರ ಟಿ-20 ವಿಶ್ವಕಪ್: ಗುಂಪುಗಳು
ಎ ಗುಂಪು: ಭಾರತ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್, ನಮೀಬಿಯಾ, ಅಮೆರಿಕ
ಬಿ ಗುಂಪು: ಶ್ರೀಲಂಕಾ, ಆಸ್ಟ್ರೇಲಿಯ, ಝಿಂಬಾಬ್ವೆ, ಐರ್‌ಲ್ಯಾಂಡ್, ಒಮಾನ್
ಸಿ ಗುಂಪು: ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ, ನೇಪಾಳ, ಇಟಲಿ
ಡಿ ಗುಂಪು: ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್, ಅಫ್ಘಾನಿಸ್ತಾನ, ಯುಎಇ, ಕೆನಡ