4ನೇ ಟೆಸ್ಟ್: ಇಂಗ್ಲೆಂಡ್ 669 ರನ್ ಗೆ ಆಲೌಟ್
PC : PTI
ಮ್ಯಾಂಚೆಸ್ಟರ್, ಜು. 26: ನಾಯಕ ಬೆನ್ ಸ್ಟೋಕ್ಸ್ ಆಕರ್ಷಕ ಶತಕ(141 ರನ್, 198 ಎಸೆತ, 11 ಬೌಂಡರಿ, 3 ಸಿಕ್ಸರ್)ಹಾಗೂ ಬ್ರೆಂಡನ್ ಕಾರ್ಸ್(47 ರನ್, 54 ಎಸೆತ, 7 ಬೌಂಡರಿ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ತಂಡದ ವಿರುದ್ಧ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 669 ರನ್ ಕಲೆ ಹಾಕಿದೆ. ಈ ಮೂಲಕ ಮೊದಲ ಇನಿಂಗ್ಸ್ ನಲ್ಲಿ 311 ರನ್ ಮುನ್ನಡೆ ಸಂಪಾದಿಸಿದೆ.
4ನೇ ದಿನವಾದ ಶನಿವಾರದ ಬೆಳಗ್ಗಿನ ಅವಧಿಯಲ್ಲಿ ಕೂಡ ಭಾರತ ಕಳಪೆ ಬೌಲಿಂಗ್ ಮುಂದುವರಿಸಿತು. ಇದರ ಲಾಭ ಪಡೆದ ಇಂಗ್ಲೆಂಡ್ ತಂಡವು ಭರ್ಜರಿ ಬ್ಯಾಟಿಂಗ್ ನಡೆಸಿತು. ಇಂದು ಎದುರಿಸಿದ 133 ಎಸೆತಗಳಲ್ಲಿ 125 ರನ್ ಕಲೆ ಹಾಕಿತು.
ಮೊದಲ ಇನಿಂಗ್ಸ್ ನಲ್ಲಿ ಆರಂಭಿಕ ಬ್ಯಾಟರ್ ಗಳಾದ ಬೆನ್ ಡಕೆಟ್(94 ರನ್) ಹಾಗೂ ಝ್ಯಾಕ್ ಕ್ರಾಲಿ(84 ರನ್) ಬೃಹತ್ ಮೊತ್ತಕ್ಕೆೆ ಭದ್ರ ಬುನಾದಿ ಹಾಕಿಕೊಟ್ಟರು. ಜೋ ರೂಟ್(150 ರನ್) ಹಲವು ದಾಖಲೆಗಳನ್ನು ಪುಡಿಗಟ್ಟಿದರು. ಓಲಿ ಪೋಪ್(71 ರನ್)ತನ್ನ ರನ್ ಬರ ನೀಗಿಸಿಕೊಂಡರು. ಸ್ಟೋಕ್ಸ್ 3ನೇ ದಿನದಾಟದಲ್ಲಿ ಕಾಲುನೋವಿಗೆ ಒಳಗಾಗಿದ್ದರೂ ಬ್ಯಾಟಿಂಗ್ ಮುಂದುವರಿಸಿ ಶತಕ ಸಿಡಿಸಿ ಸಂಭ್ರಮಿಸಿದರು.
ಶನಿವಾರ 7 ವಿಕೆಟ್ ಗಳ ನಷ್ಟಕ್ಕೆ 544 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡವು 157.1 ಓವರ್ ಗಳಲ್ಲಿ 669 ರನ್ ಗಳಿಸಿ ಆಲೌಟಾಯಿತು. ಬ್ರೆಂಡನ್ ಕಾರ್ಸ್(47 ರನ್)ವಿಕೆಟನ್ನು ಪಡೆದ ರವೀಂದ್ರ ಜಡೇಜ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಗೆ ಕೊನೆಗೂ ತೆರೆ ಎಳೆದರು.
ಭಾರತ ತಂಡವು ಈ ಹಿಂದೆ 2014ರಲ್ಲಿ ವೆಲ್ಲಿಂಗ್ಟನ್ ನಲ್ಲಿ ನ್ಯೂಝಿಲ್ಯಾಂಡ್ ತಂಡ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 600ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿತ್ತು. ಆಗ ಬ್ರೆಂಡನ್ ಮೆಕಲಮ್ ತನ್ನ ಜೀವನಶ್ರೇಷ್ಠ 302 ರನ್ ಗಳಿಸಿದ್ದರು. ಮೆಕಲಮ್ ಸದ್ಯ ಇಂಗ್ಲೆಂಡ್ ತಂಡದ ಪ್ರಧಾನ ಕೋಚ್ ಆಗಿದ್ದಾರೆ.
ಔಟಾಗದೆ 77 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಸ್ಟೋಕ್ಸ್ ಅವರು 164 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 14ನೇ ಟೆಸ್ಟ್ ಶತಕ ಪೂರೈಸಿದರು. ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿರುವ ಸ್ಟೋಕ್ಸ್, ಬ್ಯಾಟಿಂಗ್ ನಲ್ಲಿ ಶತಕವನ್ನು ಸಿಡಿಸಿ ಗಮನ ಸೆಳೆದಿದ್ದಾರೆ. ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಗಳಿಸಿ 3 ವರ್ಷಗಳು ಕಳೆದಿವೆ.
ಸ್ಟೋಕ್ಸ್ ಶತಕ ಗಳಿಸಿದ ತಕ್ಷಣ ಹೆಲ್ಮೆಟ್ ತೆಗೆದು, ಆಕಾಶದತ್ತ ನೋಡಿದರು. ತನ್ನ ಸ್ಮರಣೀಯ ಕ್ಷಣವನ್ನು ತನ್ನ ತಂದೆಗೆ ಸಮರ್ಪಿಸಿದರು. ವಾಶಿಂಗ್ಟನ್ ಸುಂದರ್ ಬೌಲಿಂಗ್ ನಲ್ಲಿ ಮುನ್ನುಗ್ಗಿ ಆಡಿದ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಮೊತ್ತವನ್ನು 600ರ ಗಡಿ ದಾಟಿಸಿದರು. ಕಾರ್ಸ್ ಜೊತೆಗೆ 10ನೇ ವಿಕೆಟ್ ನಲ್ಲಿ 97 ಎಸೆತಗಳಲ್ಲಿ 95 ರನ್ ಸೇರಿಸಿದರು. ಆಲ್ ರೌಂಡರ್ ಡಾಸನ್ ನಿನ್ನೆಯ ಮೊತ್ತಕ್ಕೆ 5 ರನ್ ಸೇರಿಸಿ ಬುಮ್ರಾಗೆ ಕ್ಲೀನ್‌ಬೌಲ್ಡಾದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಗಳಾದ ಜಡೇಜ(4-143)ಹಾಗೂ ಸುಂದರ್(2-107), ವೇಗಿ ಬುಮ್ರಾ (2-112) ಎಂಟು ವಿಕೆಟ್ ಗಳನ್ನು ಹಂಚಿಕೊಂಡರು. ಅಂಶುಲ್ ಕಾಂಬೋಜ್ ಹಾಗೂ ಮುಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಬುಮ್ರಾ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಇನಿಂಗ್ಸ್ ವೊಂದರಲ್ಲಿ 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ಅನಪೇಕ್ಷಿತ ದಾಖಲೆ ನಿರ್ಮಿಸಿದರು. ಈ ಹಿಂದೆ ಆಸ್ಟ್ರೇಲಿಯ ತಂಡದ ವಿರುದ್ಧ 99 ರನ್ ಸೋರಿಕೆ ಮಾಡಿ, 4 ವಿಕೆಟ್ ಗಳನ್ನು ಪಡೆದಿದ್ದರು.