9 ಫೈನಲ್, 9 ಗೆಲುವು: ಮುಂದುವರಿದ ಹೇಝಲ್‌ವುಡ್ ಅಜೇಯ ಓಟ
ಹೇಝಲ್‌ವುಡ್ | PC : PTI
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಹ್ಮದಾಬಾದ್‌ನಲ್ಲಿ ಮಂಗಳವಾರ ರಾತ್ರಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದು ಇತಿಹಾಸ ನಿರ್ಮಿಸಿದಾಗ ಓರ್ವ ವ್ಯಕ್ತಿ ಸದ್ದಿಲ್ಲದೆ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದರು. ಅವರೇ ಫೈನಲ್ ಪಂದ್ಯದ ಬಾಸ್-ಜೋಶ್ ಹೇಝಲ್‌ವುಡ್.
ಹೇಝಲ್‌ವುಡ್ 9 ಪ್ರಮುಖ ಟೂರ್ನಿಗಳಲ್ಲಿ ಫೈನಲ್ ಪಂದ್ಯಗಳಲ್ಲಿ 9ರಲ್ಲೂ ಗೆಲುವು ದಾಖಲಿಸಿ ಪರಿಪೂರ್ಣ ದಾಖಲೆಯನ್ನು ಕಾಯ್ದುಕೊಂಡಿದ್ದು, ಈ ಮೂಲಕ ಆಧುನಿಕ ಕ್ರಿಕೆಟ್‌ನಲ್ಲಿ ಸರಿಸಾಟಿಯಿಲ್ಲದ ಸಾಧನೆ ಮಾಡಿದ್ದಾರೆ.
ಶಾಂತ ಸ್ವಭಾವದ ಆಸ್ಟ್ರೇಲಿಯದ ವೇಗದ ಬೌಲರ್ ಹೇಝಲ್‌ವುಡ್‌ಗೆ ಫೈನಲ್ ಪಂದ್ಯ ಹೊಸದೇನಲ್ಲ. 2010ರ ಅಂಡರ್-19 ವಿಶ್ವ್ವಕಪ್‌ನಲ್ಲಿ ಸರಣಿಶ್ರೇಷ್ಠ ಎನಿಸಿಕೊಂಡಿದ್ದ ಹೇಝಲ್‌ವುಡ್ 2025ರ ಐಪಿಎಲ್ ಫೈನಲ್ ತನಕವೂ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ. ಪ್ರತಿಯೊಂದು ಚಾಂಪಿಯನ್‌ಶಿಪ್ ಹಣಾಹಣಿಯಲ್ಲೂ ಹೇಝಲ್‌ವುಡ್ ಗಮನಾರ್ಹ ಪಾತ್ರವಹಿಸಿದ್ದಾರೆ.
2025ರ ಐಪಿಎಲ್ ಫೈನಲ್‌ನಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ್ದ ಹೇಝಲ್‌ವುಡ್ ಸತತ 2 ಡಾಟ್ ಬಾಲ್ ಎಸೆದು ಪಂಜಾಬ್ ಗೆಲುವಿನ ವಿಶ್ವಾಸಕ್ಕೆ ಧಕ್ಕೆ ತಂದರು. ಶಶಾಂಕ್ ಸಿಂಗ್(ಔಟಾಗದೆ 61) ಅಬ್ಬರಿಸಿದರೂ ಆರ್‌ಸಿಬಿ 6 ರನ್‌ನಿಂದ ಜಯ ಸಾಧಿಸಿತು.
9 ಫೈನಲ್‌ನಲ್ಲಿ 9ರಲ್ಲೂ ಜಯಸಾಧಿಸಿ ಸೋಲನ್ನೇ ಕಾಣದ ಹೇಝಲ್‌ವುಡ್ ಒತ್ತಡದ ಪರಿಸ್ಥಿತಿಯಲ್ಲೂ ಶಾಂತಚಿತ್ತದಿಂದ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
► ಹೇಝಲ್‌ವುಡ್ ಆಡಿರುವ 9 ಫೈನಲ್ ಪಂದ್ಯಗಳು
2010ರ ಅಂಡರ್-19 ವಿಶ್ವಕಪ್ ಫೈನಲ್-ಪಾಕಿಸ್ತಾನ ವಿರುದ್ಧ 30ಕ್ಕೆ 4 ವಿಕೆಟ್, ಪಂದ್ಯಶ್ರೇಷ್ಠ ಗೌರವ
2012ರ ಸಿಎಲ್‌ಟಿ20 ಫೈನಲ್-ಹೈವೆಲ್ಡ್ ಲಯನ್ಸ್ ವಿರುದ್ಧ 10 ವಿಕೆಟ್‌ಗಳಿಂದ ಜಯಸಾಧಿಸಿದ ಸಿಡ್ನಿ ಸಿಕ್ಸರ್ ತಂಡದ ಪರ ಆಟ
2015ರ ಏಕದಿನ ವಿಶ್ವಕಪ್ ಫೈನಲ್-ನ್ಯೂಝಿಲ್ಯಾಂಡ್ ಅನ್ನು ಮಣಿಸಿದ ಆಸ್ಟ್ರೇಲಿಯದ ಪರ 2 ವಿಕೆಟ್
2020 ಬಿಬಿಎಲ್ ಫೈನಲ್-ಸಿಡ್ನಿ ಸಿಕ್ಸರ್ ಪರ ಪ್ರಶಸ್ತಿ
2021 ಐಪಿಎಲ್ ಫೈನಲ್-ಸಿಎಸ್‌ಕೆ ಗೆಲುವಿಗೆ ಪ್ರಮುಖ ಪಾತ್ರ
2021 ಟಿ20 ವಿಶ್ವಕಪ್ ಫೈನಲ್-ನ್ಯೂಝಿುಲ್ಯಾಂಡ್ ವಿರುದ್ಧ 16 ರನ್‌ಗೆ 3 ವಿಕೆಟ್
2023 ಏಕದಿನ ವಿಶ್ವಕಪ್ ಫೈನಲ್-ಅಹ್ಮದಾಬಾದ್‌ನಲ್ಲಿ ಭಾರತ ವಿರುದ್ಧ್ದ ಆಸ್ಟ್ರೇಲಿಯ ಗೆಲುವಿಗೆ ನೆರವು
2023 ಡಬ್ಲ್ಯುಟಿಸಿ ಫೈನಲ್-ದಿ ಓವಲ್‌ನಲ್ಲಿ ಭಾರತವನ್ನು ಸೋಲಿಸಿದ್ದ ಆಸ್ಟ್ರೇಲಿಯ ತಂಡದಲ್ಲಿ ಹೇಝಲ್‌ವುಡ್
2025 ಐಪಿಎಲ್(ಆರ್‌ಸಿಬಿ)-ಕೊನೆಯ ಓವರ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿ 6ರನ್ ಗೆಲುವಿಗೆ ನೆರವು.