9ನೇ ಕ್ರಮಾಂಕದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಆಮಿರ್ ಜಮಾಲ್
ಆಮಿರ್ ಜಮಾಲ್ | Photo: X \ @DoctorofCricket
ಸಿಡ್ನಿ: ಆಸ್ಟ್ರೇಲಿಯದ ವಿರುದ್ಧ ಸಿಡ್ನಿಯಲ್ಲಿ ಬುಧವಾರ ಆರಂಭವಾದ ಮೂರನೇ ಪಂದ್ಯದಲ್ಲಿ ಆಲ್ರೌಂಡರ್ ಆಮಿರ್ ಜಮಾಲ್ ಟೆಸ್ಟ್ ಕ್ರಿಕೆಟ್ ನಲ್ಲಿ 9ನೇ ಕ್ರಮಾಂಕದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಪಾಕಿಸ್ತಾನದ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿ ದಾಖಲೆ ನಿರ್ಮಿಸಿದರು.
ಪಾಕಿಸ್ತಾನವು 220 ರನ್ ಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್ ಗೆ ಇಳಿದ ಜಮಾಲ್ 97 ಎಸೆತಗಳಲ್ಲಿ 82 ರನ್ ಗಳಿಸಿ ಪಾಕಿಸ್ತಾನವು ಮೊದಲ ಇನಿಂಗ್ಸ್ ನಲ್ಲಿ 313 ರನ್ ಹೋರಾಟಕಾರಿ ಮೊತ್ತ ಗಳಿಸುವಲ್ಲಿ ನೆರವಾದರು. ಚೊಚ್ಚಲ ಟೆಸ್ಟ್ ಅರ್ಧಶತಕದ ಹಾದಿಯಲ್ಲಿ ಜಮಾಲ್ 9 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನು ಸಿಡಿಸಿದರು. ಜಮಾಲ್ ಅವರು ವಸೀಂ ಬಾರಿ ಅವರ ದಾಖಲೆಯನ್ನು ಮುರಿದರು. ವಸೀಂ 1972ರಲ್ಲಿ ಅಡಿಲೇಡ್ನಲ್ಲಿ 113 ಎಸೆತಗಳಲ್ಲಿ 72 ರನ್ ಗಳಿಸಿದ್ದರು.
ಒಟ್ಟಾರೆ ಜಮಾಲ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 9ನೇ ಕ್ರಮಾಂಕದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಮೂರನೇ ಆಟಗಾರನಾಗಿದ್ದಾರೆ. ಆಸಿಫ್ ಇಕ್ಬಾಲ್ 1967ರಲ್ಲಿ ದಿ ಓವಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ(146 ರನ್, 244 ಎಸೆತ)ಗಳಿಸಿದ್ದು, ಇದೊಂದು ದಾಖಲೆಯಾಗಿದೆ.
ಜಮಾಲ್ 43 ಎಸೆತಗಳಲ್ಲಿ ಔಟಾಗದೆ 7 ರನ್ ಗಳಿಸಿರುವ ಮಿರ್ ಹಂಝಾ ಅವರೊಂದಿಗೆ 10ನೇ ವಿಕೆಟ್ ಗೆ 86 ರನ್ ಜೊತೆಯಾಟದಲ್ಲಿ ಭಾಗಿಯಾದರು. ಆಸ್ಟ್ರೇಲಿಯದಲ್ಲಿ 10ನೇ ವಿಕೆಟ್ ನಲ್ಲಿ ಪಾಕಿಸ್ತಾನ ಜೋಡಿಯೊಂದು ದಾಖಲಿಸಿದ 2ನೇ ಗರಿಷ್ಠ ಜೊತೆಯಾಟ ಇದಾಗಿದೆ.