ಕ್ರೀಡೆಯಿಂದ ರಾಜಕೀಯ ಹೊರಗಿರಬೇಕು : ಎಬಿ ಡಿ ವಿಲಿಯರ್ಸ್
ಎಬಿ ಡಿ ವಿಲಿಯರ್ಸ್ | Photo Credit : X \ @ABdeVilliers17
ಹೊಸದಿಲ್ಲಿ, ಅ. 2: ಭಾರತದ ಏಶ್ಯ ಕಪ್ ವಿಜಯದ ಸುತ್ತ ಆವರಿಸಿಕೊಂಡಿರುವ ವಿವಾದಾಸ್ಪದ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಎಬಿ ಡಿ ವಿಲಿಯರ್ಸ್, ಕ್ರೀಡೆ ಮತ್ತು ಜಾಗತಿಕ ರಾಜಕೀಯವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಬೇಕು ಎಂದು ಹೇಳಿದ್ದಾರೆ.
ಅವರು ತನ್ನ ವಾರದ ಯೂಟ್ಯೂಬ್ ಕಾರ್ಯಕ್ರಮ #360ಯಲ್ಲಿ, ಏಶ್ಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಿಂದ ಏಶ್ಯಕಪ್ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿರುವುದು ಮತ್ತು ಆ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
‘‘ಟ್ರೋಫಿ ಹಸ್ತಾಂತರಿಸುವವರ ಬಗ್ಗೆ ಟೀಮ್ ಇಂಡಿಯಾಕ್ಕೆ ಸಮಾಧಾನವಿಲ್ಲ. ಕ್ರೀಡೆಯಲ್ಲಿ ಅದಕ್ಕೆ ಆಸ್ಪದವಿದೆ ಎಂದು ನನಗನಿಸುವುದಿಲ್ಲ. ರಾಜಕೀಯವು ಅದರಿಂದ ಹೊರಗಿರಬೇಕು. ಕ್ರೀಡೆಯೇ ಬೇರೆ, ಕ್ರೀಡೆಯನ್ನು ಕ್ರೀಡೆಯಾಗಿ ಸಂಭ್ರಮಿಸಬೇಕು. ಇಂತಹ ಘಟನೆಗಳು ನಡೆದಿರುವುದರಿಂದ ಬೇಸರವಾಗಿದೆ. ಆದರೆ, ಮುಂದೆ ಅವರು ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಇದು ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಸುತ್ತದೆ. ಇದನ್ನು ನೋಡುವುದನ್ನು ನಾನು ದ್ವೇಷಿಸುತ್ತೇನೆ. ಕೊನೆಯಲ್ಲಿ, ಅಲ್ಲಿನ ಪರಿಸ್ಥಿತಿ ಅತ್ಯಂತ ಮುಜುಗರಕರವಾಗಿತ್ತು’’ ಎಂದು ಅವರು ಹೇಳಿದ್ದಾರೆ.
ಮೈದಾನದ ಹೊರಗಿನ ಸಂಘರ್ಷಗಳು ಕ್ರೀಡೆಯ ಮೇಲೆ ಪರಿಣಾಮ ಬೀರಬಾರದು ಎಂದು ಅವರು ಅಭಿಪ್ರಾಯಪಟ್ಟರು. ಟ್ರೋಫಿ ಹಸ್ತಾಂತರ ಕಾರ್ಯಕ್ರಮ ಮತ್ತು ರಾಜತಾಂತ್ರಿಕತೆ ನಡುವೆ ಸಂಬಂಧ ಕಲ್ಪಿಸಲು ನಿರಾಕರಿಸಿದ ಅವರು, ಆ ಘಟನೆಯನ್ನು ನಿವಾರಿಸಬಹುದಾಗಿತ್ತು ಎಂದರು. ಅದು ಮೈದಾನದಲ್ಲಿನ ಭಾರತದ ಸಾಧನೆಯ ಮೇಲಿದ್ದ ಗಮನವನ್ನು ಬೇರೆಡೆಗೆ ಸೆಳೆಯಿತು ಎಂದು ಡಿ ವಿಲಿಯರ್ಸ್ ಹೇಳಿದರು.