ಸಿನ್ಸಿನಾಟಿ ಓಪನ್ ಟೆನಿಸ್ |ಅನಾರೋಗ್ಯದಿಂದ ಹಿಂದೆ ಸರಿದ ಸಿನ್ನರ್: ಅಲ್ಕರಾಜ್ ಚಾಂಪಿಯನ್
Photo credit: X/@carlosalcaraz
ಸಿನ್ಸಿನಾಟಿ: 2025ರ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಮೆಂಟ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತರಾಗಿದ್ದ ಇಟಲಿಯ ಯಾನಿಕ್ ಸಿನ್ನರ್, ಫೈನಲ್ ಪಂದ್ಯದ ಮಧ್ಯೆ ಅನಾರೋಗ್ಯದಿಂದ ಹಿಂದೆ ಸರಿದ ಕಾರಣ, ಅವರ ಎದುರಾಳಿ ಸ್ಪೇನ್ ನ ಕಾರ್ಲೋಸ್ ಅಲ್ಕರಾಜ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ, ಸಿನ್ಸಿನಾಟಿ ಓಪನ್ ಪ್ರಶಸ್ತಿ ಗೆದ್ದ ಮೂರನೆಯ ಸ್ಟೇನ್ ಆಟಗಾರ ಎಂಬ ಹಿರಿಮೆಗೆ ಅವರು ಭಾಜನರಾಗಿದ್ದಾರೆ.
22 ನಿಮಿಷಗಳಿಗಷ್ಟೇ ಸೀಮಿತಗೊಂಡ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಅಲ್ಕರಾಜ್, ಮೊದಲ ಸೆಟ್ ನಲ್ಲಿ 5-0 ಅಂತರದ ಮುನ್ನಡೆಯಲ್ಲಿದ್ದರು.
ಇತ್ತೀಚೆಗಷ್ಟೆ ಮುಕ್ತಾಗೊಂಡಿದ್ದ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೂರ್ನಿಯ ಫೈನಲ್ ಪಂದ್ಯದಲ್ಲೂ ಅಲ್ಕರಾಜ್ ಹಾಗೂ ಸಿನ್ನರ್ ಮುಖಾಮುಖಿಯಾಗಿದ್ದರು. ಅಂದು ಸಿನ್ನರ್ ಗೆಲುವಿನ ನಗೆ ಬೀರಿದ್ದರು.
ಪಂದ್ಯದ ನಂತರ, ಸಿನ್ನರ್ ಗಾಯದ ಬಗ್ಗೆ ಅಲ್ಕರಾಜ್ ಬೇಸರ ವ್ಯಕ್ತಪಡಿಸಿದರು. “ಯಾವುದೇ ಆಟಗಾರ ತನ್ನ ಎದುರಾಳಿ ನಿವೃತ್ತಿ ಹೊಂದುವುದನ್ನು, ಅದರಲ್ಲೂ ಫೈನಲ್ ಪಂದ್ಯದಲ್ಲಿ ನಿವೃತ್ತಿ ಹೊಂದುವುದನ್ನು ಬಯಸುವುದಿಲ್ಲ. ಅವರು ಆದಷ್ಟೂ ಶೀಘ್ರ ಚೇತರಿಸಿಕೊಳ್ಳಲಿ. ಸಿನ್ಸಿಯಾಟಿಯಲ್ಲಿನ ನನ್ನ ಪ್ರದರ್ಶನದ ಬಗ್ಗೆ ತೃಪ್ತಿಯಿದೆ. ಅಮೆರಿಕನ್ ಗ್ರ್ಯಾನ್ ಸ್ಲಾಮ್ ಓಪನ್ ಗೆ ಸನ್ನದ್ಧವಾಗಿದ್ದೇನೆ” ಎಂದು ಅವರು ಹೇಳಿದರು.
“2023ರ ಸಿನ್ಸಿನಾಟಿ ಓಪನ್ ಫೈನಲ್ ಪಂದ್ಯದಲ್ಲಿ ಪರಾಭವಗೊಂಡ ನಂತರ, ನಾನು ಇಲ್ಲಿ ಗೆಲ್ಲಲೇಬೇಕೆಂದು ಬಯಸಿದ್ದೆನು” ಎಂದೂ ಅವರು ಹೇಳಿದ್ದಾರೆ.
ವಿಶ್ವದ ಎರಡನೆ ಶ್ರೇಯಾಂಕದ ಆಟಗಾರರಾದ ಅಲ್ಕರಾಜ್ ಮೊದಲನೆ ಶ್ರೇಯಾಂಕ ಸಿನ್ನರ್ ವಿರುದ್ಧ 9-5 ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲೂ ಸಿನ್ನರ್ ರನ್ನು ಮಣಿಸಿದ್ದ ಅಲ್ಕರಾಜ್, ಪ್ರಶಸ್ತಿಗೆ ಮುತ್ತಿಟ್ಟಿದ್ದರು.