×
Ad

ಭಾರತಕ್ಕೆ ಅಸಾಮಾನ್ಯ ಗೆಲುವು ತಂದುಕೊಟ್ಟು ಭಾವುಕರಾದ ಸಿರಾಜ್

Update: 2025-08-04 21:58 IST

 ಮುಹಮ್ಮದ್ ಸಿರಾಜ್ | PC : PTI  

ಲಂಡನ್, ಆ.4: ದಿ ಓವಲ್‌ ನಲ್ಲಿ ಸೋಮವಾರ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಭಾರತ ತಂಡಕ್ಕೆ 6 ರನ್‌ನಿಂದ ಅಸಾಮಾನ್ಯ ಗೆಲುವು ತಂದು ಕೊಟ್ಟಿರುವ ಮುಹಮ್ಮದ್ ಸಿರಾಜ್ ಭಾವುಕರಾದರು.

ಸಿರಾಜ್ ಅವರು 2ನೇ ಇನಿಂಗ್ಸ್‌ ನಲ್ಲಿ 5 ವಿಕೆಟ್ ಗೊಂಚಲು ಹಾಗೂ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಗಳನ್ನು ಪಡೆದು ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಅಟ್ಕಿನ್ಸನ್ ವಿಕೆಟನ್ನು ಪಡೆದು ಇಂಗ್ಲೆಂಡ್ ಹೋರಾಟಕ್ಕೆ ತೆರೆ ಎಳೆದ ನಂತರ ಸಿರಾಜ್ ಮೈದಾನದಲ್ಲಿ ಕುಳಿತುಕೊಂಡು ಭಾವುಕರಾದರು. ಆಗ ಅವರನ್ನು ಸಹ ಆಟಗಾರರು ಸುತ್ತುವರಿದರು. ವಿಕೆಟ್‌ ಕೀಪರ್ ಧ್ರುವ್ ಜುರೆಲ್, ಸಿರಾಜ್‌ ರನ್ನು ಅಪ್ಪಿಕೊಂಡರು, ‘ನನ್ನ ಸಹೋದರನ ಮೇಲೆ ನನಗೆ ನಂಬಿಕೆ ಇತ್ತು ’’ಎಂದು ಜುರೆಲ್ ಹೇಳಿದ್ದಾರೆ.

►7 ಬಾರಿ 4 ವಿಕೆಟ್ ಗೊಂಚಲು ಪಡೆದ ಏಶ್ಯದ ಮೊದಲ ಬೌಲರ್ ಸಿರಾಜ್

ಸಿರಾಜ್ ಅವರು ಇಂಗ್ಲೆಂಡ್‌ ನಲ್ಲಿ ಆಡಿರುವ 11 ಪಂದ್ಯಗಳಲ್ಲಿ 7 ಬಾರಿ ನಾಲ್ಕು ವಿಕೆಟ್‌ ಗಳನ್ನು ಪಡೆದ ಏಶ್ಯದ ಮೊದಲ ಬೌಲರ್ ಎನಿಸಿಕೊಂಡರು. ಈ ಮೂಲಕ ಸಹ ಆಟಗಾರ ಜಸ್‌ಪ್ರಿತ್ ಬುಮ್ರಾರ ದಾಖಲೆ(5)ಮುರಿದರು.

ಇಂಗ್ಲೆಂಡ್‌ ನಲ್ಲಿ ತಲಾ 6 ಬಾರಿ 4 ವಿಕೆಟ್ ಗೊಂಚಲು ಪಡೆದಿರುವ ಪಾಕಿಸ್ತಾನದ ವಕಾರ್ ಯೂನಿಸ್ ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

►ಬುಮ್ರಾ ದಾಖಲೆ ಸರಿಗಟ್ಟಿದ ಸಿರಾಜ್

ಇಂಗ್ಲೆಂಡ್‌ ನಲ್ಲಿ ನಡೆದ ಸರಣಿಯಲ್ಲಿ ಒಟ್ಟು 23 ವಿಕೆಟ್‌ ಗಳನ್ನು ಪಡೆದಿರುವ ಸಿರಾಜ್ ಅವರು 2021-22ರಲ್ಲಿ ಇಂಗ್ಲೆಂಡ್‌ ನಲ್ಲಿ 23 ವಿಕೆಟ್‌ ಗಳನ್ನು ಪಡೆದಿದ್ದ ಜಸ್‌ಪ್ರಿತ್ ಬುಮ್ರಾರ ದಾಖಲೆಯನ್ನು ಸರಿಗಟ್ಟಿದರು.

ಸಿರಾಜ್ ಇದೀಗ ಇಂಗ್ಲೆಂಡ್‌ ನಲ್ಲಿ ಒಟ್ಟು 46 ವಿಕೆಟ್‌ ಗಳನ್ನು ಪಡೆದಿದ್ದು, ಗರಿಷ್ಠ ವಿಕೆಟ್ ಪಡೆದ ಭಾರತದ 3ನೇ ವೇಗಿ ಎನಿಸಿಕೊಂಡರು. ಬುಮ್ರಾ ಹಾಗೂ ಇಶಾಂತ್ ಶರ್ಮಾ ತಲಾ 51 ವಿಕೆಟ್‌ ಗಳನ್ನು ಪಡೆದಿದ್ದಾರೆ.

ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ 4 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಸಿರಾಜ್. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News