ಸೆಮಿಫೈನಲ್ ತಲುಪಿದ ಮಗನನ್ನು ಕಂಡು ಆನಂದ ಭಾಷ್ಪ: ನೆಟ್ಟಿಗರ ಗಮನ ಸೆಳೆದ ಚೆಸ್ ಮಾಸ್ಟರ್ ಪ್ರಜ್ಞಾನಂದ ತಾಯಿಯ ಫೋಟೋ
Photo : Twitter \ @photochess
ಹೊಸದಿಲ್ಲಿ: ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಫಿಡೆ (FIDE World Cup) ವಿಶ್ವಕಪ್‌ನಲ್ಲಿ ಆರ್ ಪ್ರಜ್ಞಾನಂದ ಅವರು 5-4 ರ ಮೂಲಕ ಅರ್ಜುನ್ ಎರಿಗೈಸಿ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ವಿಶ್ವನಾಥನ್ ಆನಂದ್ ಅವರ ಬಳಿಕ ಈ ಸಾಧನೆ ಮಾಡಿರುವ ಎರಡನೇ ಭಾರತೀಯರಾಗಿ ಪ್ರಜ್ಞಾನಂದ ಹೊರಹೊಮ್ಮಿದ್ದಾರೆ.
ತಮ್ಮ ಮಗನ ಸಾಧನೆಗೆ ಪ್ರಜ್ಞಾನಂದ ಅವರ ತಾಯಿ ಭಾವುಕರಾಗಿದ್ದು, ತದೇಕಚಿತ್ತದಿಂದ ಮಗನತ್ತಲೇ ನೋಡುತ್ತಿರುವುದು ಮತ್ತು ಆನಂದಭಾಷ್ಪ ಸುರಿಸುತ್ತಿರುವ ಅವರ ಚಿತ್ರಗಳು ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.
ಸ್ಪರ್ಧೆ ನಡೆಯುತ್ತಿದ್ದಾಗ ಅಲ್ಲಿದ್ದ ಛಾಯಾಗ್ರಾಹಕರು ಪ್ರಜ್ಞಾನಂದ ಅವರ ತಾಯಿಯ ಭಾವನಾತ್ಮಕ ಕ್ಷಣಗಳನ್ನು ಸೆರೆಹಿಡಿದಿದ್ದು, ಈ ಚಿತ್ರಗಳು ವೈರಲ್ ಆಗಿವೆ.
ಸಂದರ್ಶನ ನೀಡುತ್ತಿದ್ದ ತನ್ನ ಮಗ ಪ್ರಜ್ಞಾನಂದ ಅವರ ಪಕ್ಕದಲ್ಲಿ ನಾಗಲಕ್ಷ್ಮಿ ಅವರು ನಿಂತು, ಹೆಮ್ಮೆಯಿಂದ ಮಗನನ್ನೇ ನೋಡುತ್ತಿರುವ ಹಾಗೂ, ಒಂಟಿಯಾಗಿ ಕೂತು ಆನಂದ ಭಾಷ್ಪ ಹರಿಸುವ ಚಿತ್ರಗಳನ್ನು ಹಲವಾರು ನೆಟ್ಟಿಗರು ಹಂಚಿಕೊಂಡಿದ್ದಾರೆ.