ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಅನಾವರಣ
ಸಚಿನ್ ತೆಂಡುಲ್ಕರ್ | PC : X
ಲಂಡನ್: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಹಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಜಂಟಿಯಾಗಿ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯನ್ನು ಗುರುವಾರ ಅನಾವರಣಗೊಳಿಸಿವೆ. ಇನ್ನು ಮುಂದೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪ್ರತೀ ಟೆಸ್ಟ್ ಸರಣಿಯಲ್ಲಿ ವಿಜೇತ ತಂಡಕ್ಕೆ ಈ ಪ್ರತಿಷ್ಠಿತ ಟ್ರೋಫಿಯನ್ನು ಪ್ರದಾನಿಸಲಾಗುತ್ತದೆ.
ಶುಕ್ರವಾರದಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಹೊಸ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ನ ಗರಿಷ್ಠ ರನ್ ಸ್ಕೋರರ್ ಸಚಿನ್ ತೆಂಡುಲ್ಕರ್ ಹೆಸರಲ್ಲಿ ಈ ಟ್ರೋಫಿಯನ್ನು ನೀಡಲಾಗುತ್ತಿದೆ.
ಈ ಹಿಂದೆ ಪ್ರಸಕ್ತ ಸರಣಿಯನ್ನು ಇಂಗ್ಲೆಂಡ್ನಲ್ಲಿ ಪಟೌಡಿ ಟ್ರೋಫಿಗಾಗಿ ಹಾಗೂ ಭಾರತದಲ್ಲಿ ಆಂಥೋನಿ ಡಿ ಮೆಲ್ಲೊ ಟ್ರೋಫಿಗಾಗಿ ಆಡಲಾಗುತ್ತಿತ್ತು. ಇದೀಗ ಎರಡು ಪ್ರಶಸ್ತಿಗಳನ್ನು ವಿಲೀನಗೊಳಿಸಲಾಗಿದ್ದು, ಪಟೌಡಿ ಕುಟುಂಬದ ಪರಂಪರೆಯನ್ನು ಪಟೌಡಿ ಪದಕ ನೀಡುವ ಮೂಲಕ ಮುಂದುವರಿಸಲಾಗುತ್ತದೆ. ಪ್ರತೀ ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿಯ ಕೊನೆಯಲ್ಲಿ ವಿಜೇತ ತಂಡದ ನಾಯಕನಿಗೆ ಪಟೌಡಿ ಪದಕ ನೀಡಲಾಗುವುದು.
ಹೊಸ ಟ್ರೋಫಿಯು ಸಚಿನ್ ತೆಂಡುಲ್ಕರ್ ರ ಕವರ್ಡ್ರೈವ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಅವರ ಬೌಲಿಂಗ್ ಶೈಲಿ, ಹಸ್ತಾಕ್ಷರದ ಚಿತ್ರಗಳನ್ನು ಒಳಗೊಂಡಿದೆ. ಶ್ರೇಷ್ಠ ಪ್ರದರ್ಶನ, ಕ್ರೀಡಾ ಮನೋಭಾವದ ಮೂಲಕ ಆಧುನಿಕ ಕ್ರಿಕೆಟ್ ರೂಪಿಸಿರುವ ಇಬ್ಬರು ವ್ಯಕ್ತಿಗಳಿಗೆ ಈ ಮೂಲಕ ಗೌರವಿಸಲಾಗಿದೆ. ಆ್ಯಂಡರ್ಸನ್ ಹಾಗೂ ತೆಂಡುಲ್ಕರ್ರ ಟ್ರೋಫಿಯ ರಚನೆಯು ಪರಸ್ಪರ ಗೌರವ ಹಾಗೂ ಕ್ರಿಕೆಟ್ ಇತಿಹಾಸದ ಆಚರಣೆಯಾಗಿದೆ ಎಂದು ಇಸಿಬಿ ಹಾಗೂ ಬಿಸಿಸಿಐ ಬಣ್ಣಿಸಿವೆ.
ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 15,921 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಈ ವರ್ಷಾರಂಭದಲ್ಲಿ ನಿವೃತ್ತಿಯಾಗಿರುವ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 704 ವಿಕೆಟ್ಗಳನ್ನು ಪಡೆದಿದ್ದಾರೆ.
ತೆಂಡುಲ್ಕರ್ ಹಾಗೂ ಆ್ಯಂಡರ್ಸನ್ ಅವರು ಇಂಗ್ಲೆಂಡ್ ಹಾಗೂ ಭಾರತ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ 32 ಟೆಸ್ಟ್ ಪಂದ್ಯವನ್ನಾಡಿರುವ ತೆಂಡುಲ್ಕರ್ 51.73ರ ಸರಾಸರಿಯಲ್ಲಿ 2,535 ರನ್ ಗಳಿಸಿದ್ದಾರೆ. ಇದೇ ವೇಳೆ ಆ್ಯಂಡರ್ಸನ್ ಅವರು ಭಾರತೀಯ ಬ್ಯಾಟರ್ಗಳನ್ನು ಕಾಡಿದ್ದು, 39 ಪಂದ್ಯಗಳಲ್ಲಿ 6 ಬಾರಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 149 ವಿಕೆಟ್ಗಳನ್ನು ಪಡೆದಿದ್ದಾರೆ.
ಮೈದಾನದ ಹೊರಗೆ ಈ ಇಬ್ಬರು ತಮ್ಮ ಕೊಡುಗೆಗಾಗಿ ಗುರುತಿಸಲ್ಪಟ್ಟಿದ್ದಾರೆ. ಆ್ಯಂಡರ್ಸನ್ 2024ರಲ್ಲಿ ನೈಟ್ವುಡ್ ಪ್ರಶಸ್ತಿ ಸ್ವೀಕರಿಸಿದರೆ, ತೆಂಡುಲ್ಕರ್ಗೆ 2014ರಲ್ಲಿ ಭಾರತದ ಉನ್ನತ ನಾಗರಿಕ ಗೌರವ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.