ಅತ್ಯಂತ ವೇಗದ ದ್ವಿಶತಕ ಬಾರಿಸಿದ ಅನಾಬೆಲ್ ಸುದರ್ಲ್ಯಾಂಡ್
Annabel Sutherland (ICC Photo)
ಪರ್ತ್ (ಆಸ್ಟ್ರೇಲಿಯ): ಮಹಿಳೆಯರ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಆಸ್ಟ್ರೇಲಿಯದ ಅನಾಬೆಲ್ ಸುದರ್ಲ್ಯಾಂಡ್ ಶುಕ್ರವಾರ ಅತ್ಯಂತ ವೇಗದ ದ್ವಿಶತಕವನ್ನು ಬಾರಿಸಿದ್ದಾರೆ.
ಪರ್ತ್ನಲ್ಲಿ ನಡೆಯುತ್ತಿರುವ ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧದ ಏಕೈಕ ಟೆಸ್ಟ್ನ ಎರಡನೇ ದಿನದಂದು ಅವರು ಈ ಸಾಧನೆ ಮಾಡಿದ್ದಾರೆ. ಅವರು ತನ್ನ ದ್ವಿಶತಕವನ್ನು ಪೂರೈಸಲು ಕೇವಲ 248 ಎಸೆತಗಳನ್ನು ಬಳಸಿದರು.
ಇದಕ್ಕೂ ಮೊದಲು, ಈ ದಾಖಲೆಯು ಆಸ್ಟ್ರೇಲಿಯದವರೇ ಆಗಿರುವ ಕ್ಯಾರನ್ ರೋಲ್ಟನ್ ಅವರ ಹೆಸರಿನಲ್ಲಿತ್ತು. ಅವರು 2001ರಲ್ಲಿ ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ 306 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು.
22 ವರ್ಷದ ಸುದರ್ಲ್ಯಾಂಡ್ ಬಳಿಕ ಶೀಘ್ರವೇ 256 ಎಸೆತಗಳಲ್ಲಿ 210 ರನ್ ಗಳನ್ನು ಗಳಿಸಿ ನಿರ್ಗಮಿಸಿದರು. ಅವರು ಆಸ್ಟ್ರೇಲಿಯ ಮಹಿಳಾ ಕ್ರಿಕೆಟರ್ ಒಬ್ಬರು ಗಳಿಸಿರುವ ಗರಿಷ್ಠ ರನ್ ದಾಖಲೆಯನ್ನು ತಲುಪಲು ಕೇವಲ ಮೂರು ರನ್ ಬಾಕಿಯಿದ್ದಾಗ ಔಟಾಗಿ ನಿರಾಶೆಗೊಳಗಾದರು. ಈ ದಾಖಲೆ ಎಲೈಸ್ ಪೆರಿ ಅವರ ಹೆಸರಿನಲ್ಲಿದೆ. ಅವರು 2017ರಲ್ಲಿ 213 ರನ್ ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಅವರ ಬೃಹತ್ ಇನಿಂಗ್ಸ್ನ ಬಲದಿಂದ ಆಸ್ಟ್ರೇಲಿಯವು ತನ್ನ ಮೊದಲ ಇನಿಂಗ್ಸನ್ನು 9 ವಿಕೆಟ್ ಗಳ ನಷ್ಟಕ್ಕೆ 575 ರನ್ ಗಳಿಗೆ ಡಿಕ್ಲೇರ್ ಮಾಡಿತು. ಇದು ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ.
ದಕ್ಷಿಣ ಆಫ್ರಿಕವು ತನ್ನ ಮೊದಲ ಇನಿಂಗ್ಸನ್ನು ಕೇವಲ 76 ರನ್ ಗಳಿಗೆ ಮುಕ್ತಾಯಗೊಳಿಸಿತ್ತು. ಎರಡನೇ ದಿನದಾಟದ ಮುಕ್ತಾಯದ ವೇಳೆಗೆ, ದಕ್ಷಿಣ ಆಫ್ರಿಕವು ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 67 ರನ್ ಗಳನ್ನು ಗಳಿಸುವಷ್ಟರಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡಿದೆ. ಅದು ಈಗ ಒಟ್ಟಾರೆ 432 ರನ್ ಗಳ ಹಿನ್ನಡೆಯಲ್ಲಿದೆ.