×
Ad

ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲಾಮ್ 2025 | ಸೆಮಿ ಫೈನಲ್‌ನಲ್ಲಿ ಸೋತ ಅರ್ಜುನ್

Update: 2025-07-19 21:03 IST

PC : X \ @TakeTakeTakeApp

ಲಾಸ್ ವೇಗಸ್: ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ ಅವರ ಕನಸಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅರ್ಜುನ್ ಅವರು ಅಮೆರಿಕದ ಲೆವೊನ್ ಅರೋನಿಯನ್ ವಿರುದ್ಧ 0-2 ಅಂತರದಿಂದ ಸೋತಿದ್ದಾರೆ.

ಅತ್ಯುತ್ತಮ ಪ್ರದರ್ಶನದ ಮೂಲಕ ಅರ್ಜುನ್ ಅವರು ಫ್ರೀಸ್ಟೈಲ್ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದ ಮೊದಲ ಭಾರತೀಯ ಚೆಸ್ ಆಟಗಾರ ಎನಿಸಿಕೊಂಡಿದ್ದರು. ಅರೋನಿಯನ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ಮುಗ್ಗರಿಸಿದ್ದಾರೆ. ಅರೋನಿಯನ್ ತನ್ನ ಮೊದಲಿನ ಲಯವನ್ನು ಕಂಡುಕೊಂಡು ಫೈನಲ್ ತಲುಪಿದರು.

ಅಗ್ರ-4ರಲ್ಲಿ ಸ್ಥಾನ ಪಡೆಯಲು ಪ್ಲೇ ಆಫ್ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಹಿಕಾರು ನಕಮುರಾರನ್ನು ಮಣಿಸಿದ್ದ ಅರ್ಜುನ್ ಶನಿವಾರ ಮೊದಲ ಗೇಮ್‌ನಲ್ಲಿ ತನ್ನ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.

ಅಮೆರಿಕದ ಹಾನ್ಸ್ ಮೋಕ್ ನೀಮಾನ್ ಅವರು ತಮ್ಮದೇ ದೇಶದ ಫ್ಯಾಬಿಯಾನೊ ಕರುಯಾನೊರನ್ನು 2.5-1.5 ಅಂತರದಿಂದ ಮಣಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದರು.

ಪ್ರಶಸ್ತಿ ಸ್ಪರ್ಧೆಯಿಂದ ಹೊರ ನಡೆದಿರುವ ಪ್ರಜ್ಞಾನಂದ 3ನೇ-8ನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಜರ್ಮನಿ ತಂಡದ ವಿನ್ಸೆಂಟ್ ಕೀಮರ್‌ರನ್ನು 1.5-0.5 ಅಂತರದಿಂದ ಸೋಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News