×
Ad

ದುಬೈನಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಒಬ್ಬ ಸ್ಪಿನ್ನರ್ ಇದ್ದರೂ ಸಾಕು: ಅಶ್ವಿನ್

Update: 2025-02-15 20:45 IST

 ರವಿಚಂದ್ರನ್ ಅಶ್ವಿನ್ | PC : ICC

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡವು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶ ತಂಡವನ್ನು ಎದುರಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಪಂದ್ಯಾವಳಿಯ ಹೈಬ್ರಿಡ್ ಮಾದರಿಯ ಪ್ರಕಾರ ಭಾರತ ಆಡಲಿರುವ ಎಲ್ಲ ಪಂದ್ಯಗಳಿಗೆ ದುಬೈ ಆತಿಥ್ಯವಹಿಸಲಿದೆ. ಟೀಮ್ ಇಂಡಿಯಾದಲ್ಲಿ ಐವರು ಸ್ಪಿನ್ನರ್‌ಗಳಿದ್ದಾರೆ. ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನ ಪಿಚ್‌ಗೆ ಇಷ್ಟೊಂದು ಸ್ಪಿನ್ನರ್‌ಗಳ ಅಗತ್ಯವಿಲ್ಲ ಎಂದು ಮಾಜಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

2017ರ ನಂತರ ನಡೆಯುತ್ತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನವ ಅಧಿಕೃತ ಆತಿಥ್ಯ ದೇಶವಾಗಿದೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಐಸಿಸಿ, ಪಿಸಿಬಿ ಹಾಗೂ ಬಿಸಿಸಿಐ ನಡುವಿನ ಸಂಘರ್ಷದ ನಂತರ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲು ಸಮ್ಮತಿಸಲಾಯಿತು.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದಲ್ಲಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಅವರಲ್ಲದೆ ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ಅವರಿದ್ದಾರೆ.

ಹಿಂದಿ ಯೂಟ್ಯೂಬ್ ಚಾನೆಲ್‌ನೊಂದಿಗೆ ಮಾತನಾಡಿದ ಅಶ್ವಿನ್, 15 ಸದಸ್ಯರ ಭಾರತ ಕ್ರಿಕೆಟ್ ತಂಡದಲ್ಲಿ ಐವರು ಸ್ಪಿನ್ನರ್‌ಗಳು ಜಾಸ್ತಿಯಾಯಿತು ಎಂದು ಅಭಿಪ್ರಾಯಪಟ್ಟರು.

‘‘ದುಬೈನಲ್ಲಿ ಐವರು ಸ್ಪಿನ್ನರ್‌ಗಳು? ನನಗೆ ಗೊತ್ತಿಲ್ಲ. ನಾವು ಒಬ್ಬ ಅಥವಾ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಿದರೆ ಸಾಕಾಗುತ್ತದೆ. ಹಾರ್ದಿಕ್ ಪಾಂಡ್ಯ ಜೊತೆಗೆ ಇಬ್ಬರು ಎಡಗೈ ಸ್ಪಿನ್ನರ್‌ಗಳು(ಜಡೇಜ ಹಾಗೂ ಅಕ್ಷರ್)ನಿಮ್ಮ ಅತ್ಯುತ್ತಮ ಆಲ್‌ರೌಂಡರ್‌ಗಳು. ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜ ಇಬ್ಬರೂ ಆಡಲಿದ್ದಾರೆ. ಹಾರ್ದಿಕ್, ಕುಲದೀಪ್ ಕೂಡ ಆಡಲಿದ್ದಾರೆ’’ಎಂದು ಅಶ್ವಿನ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿರುವ ಟಿ-20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸ್ಪಿನ್ನರ್ ವರುಣ್‌ರನ್ನು ಭಾರತ ಕ್ರಿಕೆಟ್ ತಂಡಕ್ಕೆ ಸೇರಿಸಲಾಗಿದೆ. ಆದರೆ ಅಶ್ವಿನ್ ಪ್ರಕಾರ, ಭಾರತವು ಆಡುವ 11ರ ಬಳಗದಲ್ಲಿ ಕೇವಲ ಓರ್ವ ಸ್ಪೆಷಲಿಸ್ಟ್ ವೇಗಿಯನ್ನು ಆಡಿಸಿದರೆ ಮಾತ್ರ ವರುಣ್ ಆಡುವುದನ್ನು ನೋಡಲು ಸಾಧ್ಯ ಎಂದರು.

‘‘ನೀವು ತಂಡದಲ್ಲಿ ವರುಣ್ ಚಕ್ರವರ್ತಿಯನ್ನು ಬಯಸಿದರೆ, ನೀವು ಒಬ್ಬ ವೇಗಿಯನ್ನು ಹೊರಗಿಟ್ಟು, ಹಾರ್ದಿಕ್ ಅವರನ್ನು ನಿಮ್ಮ ಎರಡನೇ ವೇಗಿಯಾಗಿ ಬಳಸಬೇಕಾಗುತ್ತದೆ. ಇಲ್ಲದಿದ್ದರೆ ಮೂರನೇ ವೇಗಿಯನ್ನು ಆಡಿಸಲು ನೀವು ಸ್ಪಿನ್ನರ್ ಅನ್ನು ಕೈಬಿಡಬೇಕಾಗುತ್ತದೆ’’ ಎಂದು 537 ವಿಕೆಟ್‌ಗಳೊಂದಿಗೆ ಭಾರತದ ಇತಿಹಾಸದಲ್ಲಿ ಅತ್ಯುತ್ತಮ ಟೆಸ್ಟ್ ಆಫ್ ಸ್ಪಿನ್ನರ್ ಆಗಿರುವ ಅಶ್ವಿನ್ ಹೇಳಿದ್ದಾರೆ.

ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ತಂಡಗಳೊಂದಿಗೆ ‘ಎ’ ಗುಂಪಿನಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News