×
Ad

ಏಶ್ಯಕಪ್: ಪಾಕಿಸ್ತಾನದ ವಿರುದ್ಧ 266 ರನ್‌ಗೆ ಆಲೌಟಾದ ಭಾರತ

Update: 2023-09-02 19:51 IST

Photo : twitter \@BCCI

ಪಲ್ಲೆಕೆಲೆ, ಸೆ.2: ಆರಂಭಿಕ ಬ್ಯಾಟಿಂಗ್ ಕುಸಿತದ ಹೊರತಾಗಿಯೂ ಹಾರ್ದಿಕ್ ಪಾಂಡ್ಯ(87 ರನ್, 90 ಎಸೆತ)ಹಾಗೂ ಇಶಾನ್ ಕಿಶನ್(82 ರನ್, 81 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಏಶ್ಯಕಪ್‌ನ ಎ ಗುಂಪಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ತಂಡದ ಗೆಲುವಿಗೆ 267 ರನ್ ಗುರಿ ನೀಡಿದೆ.

ಶನಿವಾರ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ 48.5 ಓವರ್‌ಗಳಲ್ಲಿ 266 ರನ್‌ಗೆ ಆಲೌಟಾಯಿತು. ಎರಡು ಬಾರಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ್ದು ಈ ಮಧ್ಯೆ ಭಾರತವು 66 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಅಗ್ರ ಸರದಿಯ ಕುಸಿತಕ್ಕೆ ಒಳಗಾಯಿತು.

ಆಗ ಜೊತೆಯಾದ ವಿಕೆಟ್‌ಕೀಪರ್-ಬ್ಯಾಟರ್ ಕಿಶನ್ ಹಾಗೂ ಆಲ್‌ರೌಂಡರ್ ಪಾಂಡ್ಯ 5ನೇ ವಿಕೆಟ್‌ಗೆ 138 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಇದು 5ನೇ ವಿಕೆಟ್‌ನಲ್ಲಿ ಭಾರತ ಗಳಿಸಿರುವ ಗರಿಷ್ಠ ರನ್ ಜೊತೆಯಾಟವಾಗಿದೆ.

ಕಿಶನ್ 54 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ ಏಕದಿನ ಕ್ರಿಕೆಟ್‌ನಲ್ಲಿ 7ನೇ ಅರ್ಧಶತಕ ಪೂರೈಸಿದರು. ಕಿಶನ್ ಔಟಾದ ನಂತರ ಪಾಂಡ್ಯ ಅವರು ರವೀಂದ್ರ ಜಡೇಜ(14 ರನ್) ಜೊತೆ 6ನೇ ವಿಕೆಟ್‌ಗೆ 35 ರನ್ ಸೇರಿಸಿದರು. ಕಿಶನ್‌ಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 62 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 11ನೇ ಅರ್ಧಶತಕ ಪೂರ್ಣಗೊಳಿಸಿದರು.

ಪಾಕಿಸ್ತಾನದ ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಶಾಹೀನ್ ಶಾ ಅಫ್ರಿದಿ(4-35) ಯಶಸ್ವಿ ಬೌಲರ್ ಎನಿಸಿಕೊಂಡರು. ಹಾರಿಸ್ ರವೂಫ್(3-58)ಹಾಗೂ ನಸೀಂ ಶಾ(3-36) ತಲಾ 3 ವಿಕೆಟ್‌ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News