ಏಶ್ಯನ್ ಆರ್ಚರಿ ಚಾಂಪಿಯನ್‌ಶಿಪ್ | ವೈಯಕ್ತಿಕ, ಟೀಮ್ ವಿಭಾಗದಲ್ಲಿ ಸ್ವರ್ಣ ಗೆದ್ದ ಜ್ಯೋತಿ ಸುರೇಖಾ
ಜ್ಯೋತಿ ಸುರೇಖಾ |Photo Credit ; olympics.com
ಹೊಸದಿಲ್ಲಿ, ನ.13: ಢಾಕಾದಲ್ಲಿ ಗುರುವಾರ ನಡೆದ ಏಶ್ಯನ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಕಾಂಪೌಂಡ್ ಬಿಲ್ಲುಗಾರರಾದ ವಿ.ಜ್ಯೋತಿ ಸುರೇಖಾ ಹಾಗೂ ಅಭಿಷೇಕ್ ವರ್ಮಾ ನೇತೃತ್ವದಲ್ಲಿ ಭಾರತ ತಂಡವು ಮೂರು ಚಿನ್ನ ಸಹಿತ ನಾಲ್ಕು ಪದಕಗಳನ್ನು ಬಾಚಿಕೊಂಡಿದೆ.
ಜ್ಯೋತಿ ಅವರು ಮಹಿಳೆಯರ ವೈಯಕ್ತಿಕ ಹಾಗೂ ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಅಭಿಷೇಕ್ ವರ್ಮಾ ಭಾರತ ತಂಡವು ಮಿಕ್ಸೆಡ್ ಟೀಮ್‌ನಲ್ಲಿ ಚಿನ್ನ ಹಾಗೂ ಪುರುಷರ ಟೀಮ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ನೆರವಾದರು.
ಸೆಮಿ ಫೈನಲ್‌ನಲ್ಲಿ ತೈಪೆಯ ಆಟಗಾರ್ತಿಯನ್ನು 149-143 ಅಂತರದಿಂದ ಮಣಿಸಿ ಪರಿಪೂರ್ಣ ಪ್ರದರ್ಶನ ನೀಡಿದ ಜ್ಯೋತಿ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ತಮ್ಮದೇ ದೇಶದ 17ರ ವಯಸ್ಸಿನ ಪ್ರತಿಕಾ ಪ್ರದೀಪ್‌ರನ್ನು 147-145 ಅಂತರದಿಂದ ಸೋಲಿಸಿದರು.
ಇದಕ್ಕೂ ಮೊದಲು ಜ್ಯೋತಿ, ಪ್ರತಿಕಾ ಹಾಗೂ ದೀಪ್‌ಶಿಖಾ ಒಳಗೊಂಡ ಭಾರತ ತಂಡವು ಕೊರಿಯಾವನ್ನು 236-234 ಅಂತರದಿಂದ ರೋಚಕವಾಗಿ ಮಣಿಸಿ ಮಹಿಳೆಯರ ಪ್ರಶಸ್ತಿಯನ್ನು ಬಾಚಿಕೊಂಡಿತು.
ಅಭಿಷೇಕ್ ವರ್ಮಾ ಅವರು ಪ್ರಥಮೇಶ್ ಹಾಗೂ ಸಾಹಿಲ್ ಜಾಧವ್ ಜೊತೆಗೂಡಿ ಪುರುಷರ ಟೀಮ್ ವಿಭಾಗದಲ್ಲಿ ಫೈನಲ್ ಪಂದ್ಯವನ್ನು ಆಡಿದ್ದು, ಕಝಕ್‌ಸ್ತಾನದ ಎದುರಾಳಿಯ ವಿರುದ್ಧ 229-230 ಅಂತರದಿಂದ ಸೋತಿದ್ದಾರೆ.
ಅಭಿಷೇಕ್ ವರ್ಮಾ ಅವರು ಯುವ ಆಟಗಾರ್ತಿ ದೀಪ್‌ಶಿಖಾ ಅವರೊಂದಿಗೆ ಮಿಕ್ಸೆಡ್ ಟೀಮ್ ಫೈನಲ್‌ನಲ್ಲಿ ಆಡಿದ್ದು, ಆತಿಥೇಯ ಬಾಂಗ್ಲಾದೇಶ ತಂಡವನ್ನು 153-151 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ.