ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್: ಜ್ಯೋತಿ,ಅಜಯ್, ಅಬೂಬಕರ್ಗೆ ಚಿನ್ನ, ತೇಜಸ್ವಿನ್ ಗೆ ಕಂಚು
ಬ್ಯಾಂಕಾಕ್: ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನ 2ನೇ ದಿನವಾದ ಗುರುವಾರ ಭಾರತವು 3 ಚಿನ್ನದ ಪದಕಗಳನ್ನು ಜಯಿಸಿದೆ. ಮಹಿಳೆಯರ 100 ಮೀ. ಹರ್ಡಲ್ಸ್ ನಲ್ಲಿ ಭಾರತದ ಜ್ಯೋತಿ ಯೆರ್ರಾಜಿ ಚಿನ್ನದ ಪದಕ ಜಯಿಸಿದ್ದಾರೆ. ಅಜಯ್ ಕುಮಾರ್ ಸರೋಜ್ ಪುರುಷರ 1,500 ಮೀ.ನಲ್ಲಿ ಪ್ರಶಸ್ತಿ ಜಯಿಸಿದರು.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಅಬ್ದುಲ್ಲಾ ಅಬೂಬಕರ್ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತಕ್ಕೆ 3ನೇ ಚಿನ್ನದ ಪದಕ ಗೆದ್ದುಕೊಟ್ಟರು. ಅಬೂಬಕರ್ ಈ ಋತುವಿನಲ್ಲಿ ಶ್ರೇಷ್ಠ ನಿರ್ವಹಣೆ(16.92 ಮೀ.)ತೋರಿ ಚಿನ್ನದ ಪದಕ ಜಯಿಸಿದರು. ಐಶ್ವರ್ಯ ಮಿಶ್ರಾ(53.07 ಸೆಕೆಂಡ್)ಹಾಗೂ ತೇಜಸ್ವಿನ್ ಶಂಕರ್(7527 ಅಂಕ)ಕ್ರಮವಾಗಿ ಮಹಿಳೆಯರ 400 ಮೀ. ಫೈನಲ್ ಹಾಗೂ ಡೆಕಾಥ್ಲಾನ್ನಲ್ಲಿ ಕಂಚು ಜಯಿಸಿದರು. 23ರ ಹರೆಯದ ಜ್ಯೋತಿ 100 ಮೀ. ಹರ್ಡಲ್ಸ್ ಫೈನಲ್ನಲ್ಲಿ 13.09 ಸೆಕೆಂಡ್ನಲ್ಲಿ ಗುರಿ ತಲುಪಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು. ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಪುರುಷರ 1,500 ಮೀ. ಓಟದಲ್ಲಿ ಅಜಯ್ ಕುಮಾರ್ 3:41.51 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಕುಮಾರ್ ಸತತ 3ನೇ ಪದಕ ಜಯಿಸಿದರು. 2ನೇ ಬಾರಿ ಚಿನ್ನಕ್ಕೆ ಮುತ್ತಿಟ್ಟರು. ಕುಮಾರ್ ಮೇನಲ್ಲಿ ಅಮೆರಿಕದಲ್ಲಿ ತರಬೇತಿ ಪಡೆದಿದ್ದರು.