ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಚೀನಾ ವಿರುದ್ಧ ಭಾರತ ಮಹಿಳಾ ಹಾಕಿ ತಂಡ ಜಯಭೇರಿ
Photo: twitter.com/JharkhandCMO
ರಾಂಚಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಆದ ಸೋಲಿಗೆ ಸೇಡು ತೀರಿಸಿಕೊಂಡ ಭಾರತ ಮಹಿಳಾ ಹಾಕಿ ತಂಡ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾನುವಾರ ಚೀನಾ ವಿರುದ್ಧ 2-1 ಗೋಲುಗಳ ಜಯ ಸಾಧಿಸಿ ವಿಜಯದ ಅಭಿಯಾನ ಮುಂದುವರಿಸಿದೆ.
15ನೇ ನಿಮಿಷದಲ್ಲಿ ದೀಪಿಕಾ ಹಾಗೂ 26ನೇ ನಿಮಿಷದಲ್ಲಿ ಸಲೀಮಾ ಗೋಲುಗಳನ್ನು ಬಾರಿಸಿದರೆ, ಚೀನಾ ಪರವಾಗಿ ಝೋಂಗ್ ಜೊಯಾಕಿ 41ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು.
ಕಳೆದ ತಿಂಗಳು ಹಂಗ್ಝೋಹುನಲ್ಲಿ ನಡೆದ ಏಷ್ಯನ್ ಗೇಮ್ಸ್ ಕೂಟದ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಜಯ ಸಾಧಿಸಿದ ಚೀನಾ, ಟೋಕಿಯೊ ಒಲಿಂಪಿಕ್ಸ್ ಗೆ ನೇರ ಅರ್ಹತೆ ಪಡೆಯುವ ಭಾರತದ ಕನಸನ್ನು ನುಚ್ಚುನೂರುಗೊಳಿಸಿತ್ತು. ಆದರೆ ಸೋಮವಾರ ಭಾರತ ಮೂರನೇ ಗುಂಪು ಹಂತದ ಪಂದ್ಯದಲ್ಲಿ ಅಗ್ರಸ್ಥಾನವನ್ನು ಸಂಪಾದಿಸಿತು.
ಆಕ್ರಮಣಕಾರಿ ಆಟದೊಂದಿಗೆ ಮೈದಾನಕ್ಕೆ ಇಳಿದ ಭಾರತ ತಂಡ, ಎಡದಿಂದ ಬಲಕ್ಕೆ ಚೀನಾ ರಕ್ಷಣಾ ಕೋಟೆಯನ್ನು ಬೇಧಿಸುವ ಪ್ರಯತ್ನ ನಡೆಸಿತು. ಆದರೆ ಚೀನಾದ ರಕ್ಷಣಾ ಆಟಗಾರರು ಅತಿಥೇಯರ ಪ್ರಯತ್ನಕ್ಕೆ ತಡೆ ಒಡ್ಡುತ್ತಲೇ ಬಂದರು. ಭಾರತ ಬಿಗಿ ಹಿಡಿತವನ್ನು ಪಡೆದು, ಜ್ಯೋತಿ ಸೋನಿಕಾ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಗಳಿಸಿದರೂ, ಸ್ಟಾಪರ್ ಮೋನಿಕಾ ಅವರ ಲೋಪದಿಂದಾಗಿ ಗೋಲಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಕ್ಷಣ ಪೆನಾಲ್ಟಿ ಹೊಡೆತಕ್ಕೆ ಅವಕಾಶ ನೀಡಲಾಯಿತು ಹಾಗೂ ದೀಪಿಕಾ ಮೊದಲ ಭಾಗ ಕೊನೆಗೊಳ್ಳಲು 30 ಸೆಕೆಂಡ್ ಇರುವಾಗ ತಮ್ಮದೇ ಶೈಲಿಯಲ್ಲಿ ಅದನ್ನು ಗೋಲಾಗಿ ಪರಿವರ್ತಿಸಿದರು.