ಏಶ್ಯನ್ ಗೇಮ್ಸ್: ಭಾರತದ ಪುರುಷರ, ಮಹಿಳೆಯರ ಫುಟ್ಬಾಲ್ ತಂಡ ಭಾಗವಹಿಸಲು ಕ್ರೀಡಾ ಸಚಿವಾಲಯ ಅನುಮತಿ
ಹೊಸದಿಲ್ಲಿ, ಜು.26: ಕ್ರೀಡಾ ಸಚಿವಾಲಯವು ಪ್ರಸಕ್ತ ಆಯ್ಕೆ ಮಾನದಂಡಗಳನ್ನು ಸಡಿಲಗೊಳಿಸಲು ನಿರ್ಧರಿಸಿದ ಬಳಿಕ ಚೀನಾದಲ್ಲಿ ನಡೆಯಲಿರುವ ಮುಂಬರುವ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ಫುಟ್ಬಾಲ್ ತಂಡಗಳು ಭಾಗವಹಿಸಲು ಅನುಮತಿಯನ್ನು ಪಡೆದಿವೆ.
ಆರಂಭದಲ್ಲಿ ಭಾರತೀಯ ಒಲಿಂಪಿಕ್ಸ್ ಅಸೋಯೇಶನ್(ಐಒಎ)ಏಶ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಭಾರತೀಯ ಫುಟ್ಬಾಲ್ ತಂಡಗಳಿಗೆ ಅನುಮತಿ ನಿರಾಕರಿಸಿತ್ತು. ಭಾರತದ ರ್ಯಾಂಕ್ ಅಗ್ರ-8ರ ಹೊರಗಿರುವುದು ಇದಕ್ಕೆ ಕಾರಣ ಎಂದು ಅದು ಉಲ್ಲೇಖಿಸಿತ್ತು.
ಈ ಸನ್ನಿವೇಶಕ್ಕೆ ಪ್ರತಿಕ್ರಿಯೆಯಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದ್ದು, ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಪುರುಷ ಹಾಗೂ ಮಹಿಳಾ ತಂಡಗಳಿಗೆ ಅನುಮತಿ ಕೋರಿತ್ತು.
ಭಾರತದ ಪುರುಷರ ಫುಟ್ಬಾಲ್ ತಂಡದ ತರಬೇತುದಾರ ಇಗೊರ್ ಸ್ಟಿಮ್ಯಾಕ್ ಕೂಡ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದ್ದರು.
"ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಶುಭ ಸುದ್ದಿ! ನಮ್ಮ ರಾಷ್ಟ್ರೀಯ ಫುಟ್ಬಾಲ್ ತಂಡಗಳು, ಪುರುಷ ಹಾಗೂ ಮಹಿಳಾ ಎರಡೂ ತಂಡಗಳು ಮುಂಬರುವ ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಜ್ಜಾಗಿವೆ'' ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಟ್ವೀಟಿಸಿದ್ದಾರೆ.
ಭಾರತದ ಸರಕಾರದ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯವು ಈಗಿರುವ ಮಾನದಂಡದ ಪ್ರಕಾರ ಅರ್ಹತೆ ಪಡೆಯದ ಎರಡೂ ತಂಡಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಲು ನಿರ್ಧರಿಸಿದೆ.
"ಇತ್ತೀಚೆಗಿನ ದಿನಗಳಲ್ಲಿ ತಂಡಗಳ ಪ್ರದರ್ಶನಗಳನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯವು ನಿಯಮ ಸಡಿಲಿಕೆಗೆ ನಿರ್ಧರಿಸಿದೆ. ಫುಟ್ಬಾಲ್ ಆಟಗಾರರು ಏಶ್ಯನ್ ಗೇಮ್ಸ್‌ನಲ್ಲಿ ತಮ್ಮ ಅತ್ಯುತ್ತಮ ಹೆಜ್ಜೆ ಇಡುತ್ತಾರೆ ಹಾಗೂ ನಮ್ಮ ದೇಶ ಹೆಮ್ಮೆಪಡುವಂತೆ ಮಾಡುತ್ತಾರೆ ಎಂಬ ಖಾತ್ರಿ ನನಗಿದೆ'' ಎಂದು ಅನುರಾಗ್ ಠಾಕೂರ್ ಹೇಳಿದರು.
ಟೀಮ್ ಇವೆಂಟ್‌ಗಳಿಗೆ ಸಚಿವಾಲಯದ ಆಯ್ಕೆ ಮಾನದಂಡಗಳ ಪ್ರಕಾರ ಆಯಾ ಕ್ರೀಡೆಗಳ ಕಾಂಟಿನೆಂಟಲ್‌ಗಳ ಶ್ರೇಯಾಂಕಗಳಲ್ಲಿ ಅಗ್ರ-8ರಲ್ಲಿ ತಂಡಗಳಿಗೆ ಮಾತ್ರ ಏಶ್ಯಾಡ್‌ಗೆ ಪ್ರಯಾಣಿಸಲು ಅನುಮತಿಸಲಾಗುತ್ತದೆ.
ಭಾರತದ ಪುರುಷರ ತಂಡ ಏಶ್ಯದಲ್ಲಿ 18ನೇ ಸ್ಥಾನದಲ್ಲಿದ್ದರೆ, ಮಹಿಳೆಯರ ತಂಡ 11ನೇ ಸ್ಥಾನದಲ್ಲಿದೆ.
ಹ್ವಾಂಗ್‌ಝೌ ಏಶ್ಯನ್ ಗೇಮ್ಸ್ ಚೀನಾದಲ್ಲಿ ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರ ತನಕ ನಡೆಯಲಿದೆ.