ಎಟಿಪಿ ರ‍್ಯಾಂಕಿಂಗ್ಸ್: ಅಗ್ರ ಸ್ಥಾನಗಳಲ್ಲಿ ಸಿನ್ನರ್, ಅಲ್ಕರಾಝ್
ಸ್ವೀಡನ್: ಸೋಮವಾರ ಬಿಡುಗಡೆಗೊಂಡ ಹೊಸ ಎಟಿಪಿ ರ‍್ಯಾಂಕಿಂಗ್ಸ್ ನಲ್ಲಿ ಇಟಲಿಯ ಜನ್ನಿಕ್ ಸಿನ್ನರ್ ಮತ್ತು ಸ್ಪೇನ್ ನ ಕಾರ್ಲೊಸ್ ಅಲ್ಕರಾಝ್ ಅಗ್ರ ಎರಡು ಸ್ಥಾನಗಳನ್ನು ಆಕ್ರಮಿಸಿದ್ದಾರೆ. ಈ ವರ್ಷದ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಸ್ಪರ್ಧೆಗಳನ್ನು ನಿರ್ಧರಿಸಲು ಈ ರ‍್ಯಾಂಕಿಂಗ್ ಗಳನ್ನು ಬಳಸಲಾಗುತ್ತದೆ.
ವಿಂಬಲ್ಡನ್ ನಲ್ಲಿ ಸ್ಪರ್ಧೆಗಳನ್ನು ನಿರ್ಧರಿಸುವಾಗ ಸಿನ್ನರ್ ಮತ್ತು ಅಲ್ಕರಾಝ್ ಎರಡು ಭಿನ್ನ ಗುಂಪುಗಳಲ್ಲಿ ಇರುತ್ತಾರೆ. ಅವರು ಫ್ರೆಂಚ್ ಓಪನ್ ನಲ್ಲೂ ಭಿನ್ನ ಗುಂಪುಗಳಲ್ಲಿದ್ದರು ಹಾಗೂ ಅಂತಿಮವಾಗಿ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದರು. ಫೈನಲ್ ನಲ್ಲಿ ಅಲ್ಕರಾಝ್, ಸಿನ್ನರ್ ರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ.
ವಿಂಬಲ್ಡನ್ ನ ಸ್ಪರ್ಧೆಗಳನ್ನು ಶುಕ್ರವಾರ ನಿರ್ಧರಿಸಲಾಗುತ್ತದೆ. ಪಂದ್ಯಾವಳಿಯು ಸೋಮವಾರ ಆರಂಭಗೊಳ್ಳಲಿದೆ.
2 ಬಾರಿಯ ಹಾಲಿ ಚಾಂಪಿಯನ್ ಅಲ್ಕರಾಝ್, ಕ್ವೀನ್ಸ್ ಕ್ಲಬ್ ಚಾಂಪಿಯನ್ಶಿಪ್ಸ್ ಪ್ರಶಸ್ತಿಯೊಂದಿಗೆ ಈ ಬಾರಿ ವಿಂಬಲ್ಡನ್ ಪ್ರವೇಶಿಸುತ್ತಿದ್ದಾರೆ.
ಕ್ವೀನ್ಸ್ ಕಪ್ ಫೈನಲ್ ನಲ್ಲಿ ಅಲ್ಕರಾಝ್ ವಿರುದ್ಧ ಸೋಲನುಭವಿಸಿದ ಝೆಕ್ನ ಜಿರಿ ಲೆಹೆಕ 5 ಸ್ಥಾನ ಮೇಲೇರಿ 25ನೇ ಸ್ಥಾನದಲ್ಲಿದ್ದಾರೆ. ಸೆಮಿಫೈನಲ್ ನಲ್ಲ್ ಲೆಹೆಕ ಎದುರು ಸೋತ ಬ್ರಿಟನ್ ನ ಜಾಕ್ ಡ್ರೇಪರ್ ತನ್ನ ಜೀವನಶ್ರೇಷ್ಠ ರ‍್ಯಾಂಕಿಂಗ್ 4ನೇ ಸ್ಥಾನಕ್ಕೆ ಮರಳಿದ್ದಾರೆ. ಹಾಗಾಗಿ, ಅವರು ವಿಂಬಲ್ಡನ್ ನಲ್ಲಿ ಸೆಮಿಫೈನಲ್ ಗೆ ಮುನ್ನ ಸಿನ್ನರ್ ಅವರನ್ನಾಗಲಿ, ಅಲ್ಕರಾಝ್ ಅವರನ್ನಾಗಲಿ ಎದುರಿಸುವುದಿಲ್ಲ.
ಅಮೆರಿಕದ ಟೇಲರ್ ಫ್ರಿಟ್ಝ್ ಮತ್ತು 24 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸರ್ಬಿಯದ ನೊವಾಕ್ ಜೊಕೊವಿಕ್ ಕ್ರಮವಾಗಿ 5 ಹಾಗೂ 6ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಹೋಲ್ಗರ್ ರೂನ್ ಒಂದು ಸ್ಥಾನ ಮೇಲೇರಿ ಎಂಟನೇ ಸ್ಥಾನ ಗಳಿಸಿದರೆ, ಡನೀಲ್ ಮೆಡ್ವೆಡೆವ್ ಹಾಲ್ ಓಪನ್ ನಲ್ಲಿ ರನ್ನರ್-ಅಪ್ ಆಗಿರುವ ಕಾರಣದಿಂದ ಅಗ್ರ 10ರ ಸ್ಥಾನಕ್ಕೆ ಮರಳಿದ್ದು, ಒಂಭತ್ತನೇ ಸ್ಥಾನದಲ್ಲಿದ್ದಾರೆ.
ಕಝಖ್ಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಹಾಲ್ ಓಪನ್ ನಲ್ಲಿ ಪ್ರಶಸ್ತಿ ಗೆದ್ದ ಬಳಿಕ 15 ಸ್ಥಾನ ಮೇಲೇರಿ 30ನೇ ಸ್ಥಾನವನ್ನು ಗಳಿಸಿದ್ದಾರೆ.