2ನೇ ಅನಧಿಕೃತ ಟೆಸ್ಟ್: ಆಸ್ಟ್ರೇಲಿಯ ‘ಎ’ಗೆ 242 ರನ್ ಮುನ್ನಡೆ
ಲಕ್ನೋ, ಸೆ. 24: ಲಕ್ನೋದ ಬಿಆರ್‌ಎಸ್‌ಎಬಿವಿ ಏಕಾನ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಭಾರತ ‘ಎ’ ಮತ್ತು ಆಸ್ಟ್ರೇಲಿಯ ‘ಎ’ ತಂಡಗಳ ನಡುವಿನ ಎರಡನೇ ಅನಧಿಕೃತ ಟೆಸ್ಟ್‌ನ ಎರಡನೇ ದಿನವಾದ ಬುಧವಾರ ಪ್ರವಾಸಿ ತಂಡವು ಪ್ರಬಲ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯ ‘ಎ’ ತಂಡದ ವೇಗಿ ಹೆನ್ರಿ ತಾರ್ನ್‌ಟನ್ ಭಾರತ ‘ಎ’ ತಂಡದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟರ್‌ಗಳ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ನಾಲ್ಕು ವಿಕೆಟ್‌ಗಳನ್ನು ಉರುಳಿಸುವ ಮೂಲಕ ದೊಡ್ಡ ಹೊಡೆತ ನೀಡಿದ್ದಾರೆ.
ಆಸ್ಟ್ರೇಲಿಯ ‘ಎ’ ತನ್ನ ಮೊದಲ ಇನಿಂಗ್ಸ್‌ನಲ್ಲಿ 420 ರನ್‌ಗಳನ್ನು ಕಲೆ ಹಾಕಿದ ಬಳಿಕ, ಆತಿಥೇಯ ತಂಡದ ಮೊದಲ ಇನಿಂಗ್ಸನ್ನು ಕೇವಲ 194 ರನ್‌ಗೆ ನಿಯಂತ್ರಿಸಿತು. ಈ ಮೂಲಕ ಅದು 226 ರನ್‌ಗಳ ಬೃಹತ್ ಮೊದಲ ಇನಿಂಗ್ಸ್ ಮುನ್ನಡೆಯನ್ನು ಗಳಿಸಿದೆ. ಎರಡನೇ ದಿನದಾಟದ ಕೊನೆಗೆ, ಒಟ್ಟಾರೆಯಾಗಿ ಆಸ್ಟ್ರೇಲಿಯ ‘ಎ’ 242 ರನ್‌ಗಳ ಮುನ್ನಡೆ ಪಡೆದಿದೆ.
ಭಾರತದ ಮೇಲಿನ ಹೆಚ್ಚಿನ ಹಾನಿಯನ್ನು ತಾರ್ನ್‌ಟನ್ ಮಾಡಿದರು. ಅವರು ಕೇವಲ 36 ರನ್‌ಗಳನ್ನು ಕೊಟ್ಟು ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಅವರು ಎನ್. ಜಗದೀಶನ್ (38), ದೇವದತ್ತ ಪಡಿಕ್ಕಲ್ (1), ನಾಯಕ ಧ್ರುವ ಜೂರೆಲ್ (1) ಮತ್ತು ಮುಹಮ್ಮದ್ ಸಿರಾಜ್ (1) ವಿಕೆಟ್‌ಗಳನ್ನು ಪಡೆದರು.
ತಾರ್ನ್‌ಟನ್ ಎಸೆದ ಚೆಂಡು ಪ್ರಸಿದ್ಧ ಕೃಷ್ಣ (16)ರ ಹೆಲ್ಮೆಟ್‌ಗೆ ಬಡಿಯಿತು. ತಲೆನೋವು ಕಾಡಿದ ಹಿನ್ನೆಲೆಯಲ್ಲಿ ಅವರು ಗಾಯಗೊಂಡು ನಿವೃತ್ತಿಯಾದರು.
ಸಾಯಿ ಸುದರ್ಶನ್ 75 ರನ್‌ಗಳ ದೇಣಿಗೆ ನೀಡಿದರು ಮತ್ತು ಅವರು ತಂಡದ ಗರಿಷ್ಠ ಸ್ಕೋರ್‌ದಾರರಾದರು.
ಇದಕ್ಕೂ ಮೊದಲು ಆಸ್ಟ್ರೇಲಿಯ ‘ಎ’ ತಂಡವು ತನ್ನ ಮೊದಲ ಇನಿಂಗ್ಸನ್ನು 9 ವಿಕೆಟ್‌ಗಳ ನಷ್ಟಕ್ಕೆ 350 ರನ್ ಇದ್ದಲ್ಲಿಂದ ಮುಂದುವರಿಸಿತು. ಕೊನೆಯ ವಿಕೆಟ್ ಜೋಡಿಯಾದ ಟಾಡ್ ಮರ್ಫಿ (76) ಮತ್ತು ತಾರ್ನ್‌ಟನ್ (32) ಬುಧವಾರ ಪಂದ್ಯ ಆರಂಭಗೊಂಡ ಬಳಿಕ ಒಂದು ಗಂಟೆಯಲ್ಲಿ 70 ರನ್‌ಗಳನ್ನು ಸೇರಿಸಿದರು.
ಎರಡನೇ ದಿನದಾಟ ಮುಗಿದಾಗ ಆಸ್ಟ್ರೇಲಿಯ ‘ಎ’ ತಂಡವು ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 16 ರನ್ ಗಳಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ಛಾಪು ತೋರಿಸುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು.
ಗರ್ನೂರ್ ಬ್ರಾರ್ ತನ್ನ ಮೊದಲ ಎಸೆತದಲ್ಲೇ ಆಸ್ಟ್ರೇಲಿಯ ‘ಎ’ ತಂಡದ ಸ್ಯಾಮ್ ಕೊನ್‌ಸ್ಟಾಸ್ (3)ರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಮುಹಮ್ಮದ್ ಸಿರಾಜ್, ಕ್ಯಾಂಬೆಲ್ ಕೆಲವೇ (0) ವಿಕೆಟ್ ಉರುಳಿಸಿದರು.
ಬಳಿಕ, ದಿನದಾಟ ಮುಗಿಯುವ ಹಂತದಲ್ಲಿ ಮಾನವ್ ಸುತರ್, ಒಲಿವರ್ ಪೀಕ್ ಅವರ ವಿಕೆಟನ್ನು ಪಡೆದರು.
ಭಾರತ ‘ಎ’ ತಂಡವು ವಿಳಂಬವಾಗಿ ಪ್ರತಿರೋಧ ತೋರಿದರೂ, ದಿನದ ಗೌರವ ಸ್ಪಷ್ಟವಾಗಿ ತಾರ್ನ್‌ಟನ್‌ಗೆ ಸಲ್ಲುತ್ತದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ‘ಎ’ ಮೊದಲ ಇನಿಂಗ್ಸ್ 420
ಸ್ಯಾಮ್ ಕೊನ್‌ಸ್ಟಾಸ್ 49, ನತಾನ್ ಮೆಕ್‌ಸ್ವೀನಿ 74, ಒಲಿವರ್ ಪೀಕ್ 29, ಜೋಶ್ ಫಿಲಿಪ್ 39, ಜಾಕ್ ಎಡ್ವಡ್ಸ್ 88, ಟಾಡ್ ಮರ್ಫಿ 76, ಹೆನ್ರಿ ತಾರ್ನ್‌ಟನ್ (32 ಅಜೇಯ)
ಗರ್ನೂರ್ ಬ್ರಾರ್ 3-75, ಮಾನವ್ ಸೂತರ್ 5-107
ಭಾರತ ‘ಎ’ ಮೊದಲ ಇನಿಂಗ್ಸ್ 194
ನಾರಾಯಣ ಜಗದೀಶನ್ 38, ಸಾಯಿ ಸುದರ್ಶನ್ 75, ಆಯುಷ್ ಬದೋನಿ 21
ಟಾಡ್ ಮರ್ಫಿ 2-48, ಹೆನ್ರಿ ತಾರ್ನ್‌ಟನ್ 4-36
ಆಸ್ಟ್ರೇಲಿಯ ‘ಎ’ ದ್ವಿತೀಯ ಇನಿಂಗ್ಸ್ 16-3
ನತಾನ್ ಮೆಕ್‌ಸ್ವೀನಿ (11 ಅಜೇಯ)