ಸ್ಪರ್ಧಾತ್ಮಕ ಈಜಿಗೆ ಆಸ್ಟ್ರೇಲಿಯದ ಒಲಿಂಪಿಕ್ಸ್ ಚಾಂಪಿಯನ್ ಟಿಟ್ಮಸ್ ವಿದಾಯ
ಟಿಟ್ಮಸ್ | Photo Credit : AP
ಮೆಲ್ಬರ್ನ್, ಅ.16: ಆಸ್ಟ್ರೇಲಿಯದ ನಾಲ್ಕು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಅರಿಯರ್ನ್ ಟಿಟ್ಮಸ್ ತನ್ನ 25ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಈಜಿಗೆ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಈಮೂಲಕ ತನ್ನ ಯಶಸ್ವಿ ವೃತ್ತಿಬದುಕಿಗೆ ತೆರೆ ಎಳೆದರು.
ಆಸ್ಟ್ರೇಲಿಯದ ಅತ್ಯಂತ ಶ್ರೇಷ್ಠ ಅತ್ಲೀಟ್‌ಗಳ ಪೈಕಿ ಒಬ್ಬರಾಗಿರುವ ಟಿಟ್ಮಸ್ ಬುಧವಾರ ತನ್ನ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಟಿಟ್ಮಸ್ ಅವರು 8 ಒಲಿಂಪಿಕ್ಸ್ ಪದಕಗಳು ಹಾಗೂ ನಾಲ್ಕು ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿ ಸ್ವಿಮ್ಮಿಂಗ್ ಗೆ ಮರಳುವ ಯೋಜನೆ ಹಾಕಿದ್ದ ಟಿಟ್ಮಸ್ ಅವರ ಈ ನಿರ್ಧಾರವು ಆಸ್ಟ್ರೇಲಿಯ ಪ್ರಜೆಗಳಿಗೆ ಅಚ್ಚರಿ ತಂದಿದೆ.
‘‘ಇದು ನಿಜವಾಗಿಯೂ ಕಠಿಣ ನಿರ್ಧಾರವಾಗಿತ್ತು. ನನಗೆ ಈಜು ತುಂಬಾ ಇಷ್ಟ. ನಾನು ಯಾವಾಗಲೂ ಈಜುವುದನ್ನು ಇಷ್ಟಪಡುತ್ತೇನೆ. ಚಿಕ್ಕವಳಿದ್ದಾಗಲೇ ಈಜಿನ ಮೇಲೆ ನನಗೆ ವ್ಯಾಮೋಹವಿತ್ತು. ನನ್ನ ಜೀವನದಲ್ಲಿ ಕೆಲವು ವಿಷಯಗಳು ಸ್ವಲ್ಪ ಹೆಚ್ಚು ಮುಖ್ಯವೆಂದು ಅರಿತುಕೊಂಡಿದ್ದೇನೆ’’ಎಂದು ಟಿಟ್ಮಸ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದಲ್ಲಿ ತನ್ನ ನಿರ್ಧಾರದ ಬಗ್ಗೆ ತಿಳಿಸಿದರು.
ಪ್ಯಾರಿಸ್ ಕ್ರೀಡಾಕೂಟದಲ್ಲಿ ‘ಶತಮಾನದ ಓಟ’ಎಂದು ಕರೆಯಲ್ಪಟ್ಟ 400 ಮೀ. ಫ್ರೀಸ್ಟೈಲ್ ಫೈನಲ್ ನಲ್ಲಿ ಟಿಟ್ಮಸ್ ತನ್ನ ಮೂರನೇ ವೈಯಕ್ತಿಕ ಒಲಿಂಪಿಕ್ಸ್ ಪದಕವನ್ನು ಗೆದ್ದಿದ್ದರು. ಅಮೆರಿಕದ ಕಾಟೀ ಲೆಡೆಕಿ ಹಾಗೂ ಕೆನಡಾದ ಸಮ್ಮರ್ ಮೆಕಿಂಟೋಶ್ ಅವರನ್ನು ಸೋಲಿಸಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದರು.