ಬಾಂಗ್ಲಾದೇಶದ ವಿರುದ್ಧ ಮೊದಲ ಟಿ20 ಪಂದ್ಯ | ಭಾರತದ ಪುರುಷರ ಅಂಧರ ತಂಡಕ್ಕೆ 7 ವಿಕೆಟ್ ಗಳ ಭರ್ಜರಿ ಜಯ
ಬೆಂಗಳೂರು: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆದಿದ್ದು, ಈ ಪಂದ್ಯವನ್ನು ಭಾರತ ತಂಡವು ಏಳು ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಗೆಲ್ಲಲು 132 ರನ್ ಗುರಿ ಪಡೆದಿದ್ದ ಟೀಮ್ ಇಂಡಿಯಾ ಮೂರು ವಿಕೆಟ್ ಗಳನ್ನು ಕಳೆದುಕೊಂಡು 13.3 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು
ಇಂಡಸ್ ಇಂಡ್ ಬ್ಯಾಂಕ್ ಪ್ರಸ್ತುತಪಡಿಸುತ್ತಿರುವ ಭಾರತ ಹಾಗೂ ಬಾಂಗ್ಲಾದೇಶದ ದ್ವಿಪಕ್ಷೀಯ ಟಿ20 ಸರಣಿ ಇಂದು ಬೆಂಗಳೂರಿನ ಹೊರವಲಯದಲ್ಲಿರುವ ಮಣಿಪಾಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.
ಟೀಮ್ ಇಂಡಿಯಾದ ಪರ ಪ್ರಕಾಶ್ ಜಯರಾಮಯ್ಯ 26 ಎಸೆತಗಳಲ್ಲಿ 8 ಬೌಂಡರಿ ಗಳ ಸಹಿತ 44 ರನ್ ಸಿಡಿಸಿದರು . ಪ್ರಕಾಶ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ತನ್ನ ನಿಗದಿತ 20 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ 131 ರನ್ ಗಳಿಸಲ್ಲಷ್ಟೇ ಶಕ್ತವಾಯಿತು.
ಕಾಂಗ್ರೆಸ್ ವಕ್ತಾರ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕರಾದ ಡಾ.ಮಹಾಂತೇಶ್ ಜಿ.ಕೆ . ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಡಿಪಿಟಿ ರಿಜಿಸ್ಟರ್ ಆದ ರಾಘವೇಂದ್ರ ಪ್ರಭು ಹಾಗೂ ಇತರರು ಈ ಪಂದ್ಯಾವಳಿಗೆ ಚಾಲನೆ ನೀಡಿದರು.