×
Ad

ದಕ್ಷಿಣ ಆಫ್ರಿಕಾ ತಂಡವನ್ನು 113 ರನ್‌ಗೆ ನಿಯಂತ್ರಿಸಿದ ಬಾಂಗ್ಲಾದೇಶ

Update: 2024-06-10 22:11 IST

PC: PTI 

ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್‌ಗಳ ನಷ್ಟಕ್ಕೆ 113 ರನ್‌ಗೆ ನಿಯಂತ್ರಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ವೇಗಿ ತಂಝಿಮ್ ಹಸನ್(3-18) ನೇತೃತ್ವದ ಬಾಂಗ್ಲಾದೇಶ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ಹರಿಣ ಪಡೆ ಕಡಿಮೆ ಮೊತ್ತ ಗಳಿಸಿತು.

ದಕ್ಷಿಣ ಆಫ್ರಿಕಾದ ಪರ ಹೆನ್ರಿಕ್ ಕ್ಲಾಸನ್(46 ರನ್, 44 ಎಸೆತ, 2 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.

ಡೇವಿಡ್ ಮಿಲ್ಲರ್(29 ರನ್, 38 ಎಸೆತ) ಹಾಗೂ ಕ್ವಿಂಟನ್ ಡಿಕಾಕ್(18 ರನ್, 11 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ತಂಝಿಮ್ ದಕ್ಷಿಣ ಆಫ್ರಿಕಾದ ಅಗ್ರ ಸರದಿಯ ಬ್ಯಾಟರ್‌ಗಳನ್ನು ಕಾಡುವ ಮೂಲಕ ಯಶಸ್ವಿ ಪ್ರದರ್ಶನ ನೀಡಿದರೆ ತಸ್ಕಿನ್ ಅಹ್ಮದ್(2-19) ಹಾಗೂ ರಿಶದ್ ಹುಸೈನ್(1-32) ತಂಝೀಮ್‌ಗೆ ಸಾಥ್ ನೀಡಿದರು. ಕ್ಲಾಸನ್ ಹಾಗೂ ಮಿಲ್ಲರ್‌ರಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗಿದ್ದರೂ ಬಾಂಗ್ಲಾದೇಶ ತಂಡ ಸಂಘಟಿತ ಪ್ರದರ್ಶನ ನೀಡಿತು.

ದಕ್ಷಿಣ ಆಫ್ರಿಕಾ ಮೊದಲ 5 ಓವರ್‌ಗಳಲ್ಲಿ 23 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ

ಕ್ಲಾಸನ್ ಹಾಗೂ ಮಿಲ್ಲರ್ ಐದನೇ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿ ದಕ್ಷಿಣ ಆಫ್ರಿಕಾಕ್ಕೆ ಆಸರೆಯಾದರು.

ಮೊದಲ ಓವರ್‌ನಲ್ಲೆ ರೀಝಾ ಹೆಂಡ್ರಿಕ್ಸ್(0)ವಿಕೆಟನ್ನು ಕಳೆದುಕೊಂಡು ದಕ್ಷಿಣ ಆಫ್ರಿಕಾ ಕಳಪೆ ಆರಂಭ ಪಡೆಯಿತು. ಕ್ವಿಂಟನ್ ಡಿಕಾಕ್(18 ರನ್), ಮಾರ್ಕ್ರಮ್(4 ರನ್) ಹಾಗೂ ಟ್ರಿಸ್ಟನ್ ಸ್ಟಬ್ಸ್(0) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ನಾಸ್ಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣದ ಪಿಚ್‌ನಲ್ಲಿ ಕ್ಲಾಸನ್ ಹಾಗೂ ಮಿಲ್ಲರ್ ರನ್ ಗಳಿಸುವಲ್ಲಿ ಪರದಾಟ ನಡೆಸಿದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 113/6

(ಹೆನ್ರಿಕ್ ಕ್ಲಾಸನ್ 46, ಡೇವಿಡ್ ಮಿಲ್ಲರ್ 29, ಕ್ವಿಂಟನ್ ಡಿಕಾಕ್ 18, ತಂಝಿಮ್ ಹಸನ್ 3-18, ತಸ್ಕಿನ್ ಅಹ್ಮದ್ 2-19)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News