ಭಾರತ ಕ್ರಿಕೆಟ್ ತಂಡದ ಬಾಂಗ್ಲಾದೇಶ ಪ್ರವಾಸ ಇನ್ನೂ ಖಚಿತವಾಗಿಲ್ಲ: ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಮ್
ಅಮಿನುಲ್ ಇಸ್ಲಾಮ್ | PC ; X
ಢಾಕಾ: ಭಾರತ ಕ್ರಿಕೆಟ್ ತಂಡವು ಈ ವರ್ಷದ ಆಗಸ್ಟ್ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಪ್ರವಾಸವನ್ನು ಇನ್ನಷ್ಟೇ ಖಚಿತಪಡಿಸಬೇಕಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ(ಬಿಸಿಬಿ)ಅಧ್ಯಕ್ಷ ಅಮಿನುಲ್ ಇಸ್ಲಾಮ್ ಹೇಳಿದ್ದಾರೆ.
ಎಪ್ರಿಲ್ ನಲ್ಲಿ ಬಿಸಿಬಿ ಭಾರತ ಪ್ರವಾಸದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಇದರ ಪ್ರಕಾರ 3 ಏಕದಿನ ಪಂದ್ಯಗಳು ಆಗಸ್ಟ್ 17, 20 ಹಾಗೂ 23ರಂದು ನಡೆಯಲಿದೆ. ಆ ನಂತರ ಟಿ20 ಸರಣಿಯು ಆಗಸ್ಟ್ 26, 29 ಹಾಗೂ 31ರಂದು ನಡೆಯಲಿದೆ. ಈ ಎಲ್ಲ ಪಂದ್ಯಗಳನ್ನು ಮೀರ್ಪುರ ಹಾಗೂ ಚಟ್ಟೋಗ್ರಾಮ್ ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು.
‘‘ನಾವು ಈಗಾಗಲೇ ಬಿಸಿಸಿಐಯೊಂದಿಗೆ ಮಾತನಾಡಿದ್ದೇವೆ. ಚರ್ಚೆಯು ಸಕಾರಾತ್ಮಕವಾಗಿತ್ತು. ಭಾರತ ತಂಡದ ಬಾಂಗ್ಲಾ ಪ್ರವಾಸವು ಮುಂದಿನ ತಿಂಗಳು ನಿಗದಿಯಂತೆಯೇ ನಡೆಯುವ ವಿಶ್ವಾಸದಲ್ಲಿದ್ದೇವೆ. ಆದರೆ ಭಾರತ ಕ್ರಿಕೆಟ್ ತಂಡವು ಸರಕಾರದ ಅನುಮತಿಗಾಗಿ ಕಾಯುತ್ತಿದೆ. ಒಂದು ವೇಳೆ ಭಾರತ ತಂಡವು ಆಗಸ್ಟ್ ನಲ್ಲಿ ಬಾಂಗ್ಲಾದೇಶಕ್ಕೆ ಆಗಮಿಸದೇ ಇದ್ದಲ್ಲಿ, ಮುಂದಿನ ಲಭ್ಯವಿರುವ ದಿನದಲ್ಲಿ ಸರಣಿ ಆಡಲಾಗುವುದು ಎಂದು ಬಿಸಿಸಿಐ ನಮಗೆ ಭರವಸೆ ನೀಡಿದೆ. ಈಗಿನ ಅನಿಶ್ಚಿತತೆಗೆ ನಿರ್ದಿಷ್ಟ ಕಾರಣ ನೀಡಲಾಗಿಲ್ಲ’’ಎಂದು ಸೋಮವಾರ ಶೇರ್-ಇ-ಬಾಂಗ್ಲಾ ನ್ಯಾಶನಲ್ ಸ್ಟೇಡಿಯಮ್ ನಲ್ಲಿ 19ನೇ ಮಂಡಳಿ ಸಭೆಯ ನಂತರ ಅಮಿನುಲ್ ಹೇಳಿದ್ದಾರೆ.