×
Ad

ರೋಹಿತ್, ಕೊಹ್ಲಿ ಹಾಗೂ ಗಂಭೀರ್ ನಡುವಿನ ಉದ್ವಿಗ್ನತೆ ಶಮನಕ್ಕೆ ಬಿಸಿಸಿಐ ಹೆಜ್ಜೆ!

Update: 2025-12-01 21:07 IST

ಗೌತಮ್ ಗಂಭೀರ್ , ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ  | Photo Credit : PTI 


ಮುಂಬೈ, ಡಿ. 1: ಎಲ್ಲಾ ಮಾದರಿಗಳ ಕ್ರಿಕೆಟ್‌ಗೆ ಮಾರ್ಗ ನಕ್ಷೆಯೊಂದನ್ನು ರೂಪಿಸಲು ಮತ್ತು ಪ್ರಮುಖ ವ್ಯಕ್ತಿಗಳ ನಡುವಿನ ಸಂವಹನವನ್ನು ಸುಗಮಗೊಳಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಪುರುಷರ ಕ್ರಿಕೆಟ್ ತಂಡದ ಆಡಳಿತದೊಂದಿಗೆ ಸಭೆಯೊಂದನ್ನು ನಿಗದಿಪಡಿಸಿದೆ. ಸಭೆಯು ಭಾರತ ಮತ್ತು ದಕ್ಷಿಣ ಆಫ್ರಿಕ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಮುನ್ನ ಬುಧವಾರ ರಾಯ್ಪುರದಲ್ಲಿ ನಡೆಯಲಿದೆ.

ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯ, ಜಂಟಿ ಕಾರ್ಯದರ್ಶಿ ಪ್ರಭುತೇಜ್ ಸಿಂಗ್ ಭಾಟಿಯ, ಪ್ರಧಾನ ಕೋಚ್ ಗೌತಮ್ ಗಂಭೀರ್ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಭಾಗವಹಿಸುವ ನಿರೀಕ್ಷೆಯಿದೆ. ಸಭೆಯು ಎರಡನೇ ಏಕದಿನ ಪಂದ್ಯದ ದಿನವೇ ನಡೆಯಲಿರುವುದರಿಂದ ಹಿರಿಯ ಆಟಗಾರರನ್ನು ಕರೆಯುವ ಸಾಧ್ಯತೆ ವಿರಳವಾಗಿದೆ.

ಆಯ್ಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬರಲು ಆಯ್ಕೆಗಾರರು ಮತ್ತು ತಂಡಾಡಳಿತ ನಡುವೆ ಸಾಮರಸ್ಯ ಇರುವಂತೆ ನೋಡಿಕೊಳ್ಳುವುದು, ವೈಯಕ್ತಿಕ ಬೆಳವಣಿಗೆ ದಾರಿಯನ್ನು ಸುಧಾರಿಸುವುದು ಮತ್ತು ಒಟ್ಟಾರೆ ತಂಡ ನಿರ್ವಹಣೆಯನ್ನು ಹೆಚ್ಚಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದು ಹಿರಿಯ ಬಿಸಿಸಿಯ ಅಧಿಕಾರಿಯೊಬ್ಬರು ತಿಳಿಸಿದರು.

‘‘ಟೆಸ್ಟ್ ಸರಣಿಯ ಅವಧಿಯಲ್ಲಿ, ಮೈದಾನದ ಒಳಗಿನ ಮತ್ತು ಹೊರಗಿನ ಗೊಂದಲಕಾರಿ ತಂತ್ರಗಾರಿಕೆಗಳು ಗಮನ ಸೆಳೆದಿದ್ದವು. ನಾವು ಈ ವಿಷಯದಲ್ಲಿ ಸ್ಪಷ್ಟತೆ ಬಯಸುತ್ತೇವೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಮುಖ್ಯವಾಗಿ ಮುಂದಿನ ಟೆಸ್ಟ್ ಸರಣಿಗೆ ಎಂಟು ತಿಂಗಳು ಇರುವುದರಿಂದ ಈ ವಿಷಯವನ್ನು ಈಗಲೇ ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ’’ ಎಂದು ಅವರು ಹೇಳಿದರು.

ಭಾರತೀಯ ಕ್ರಿಕೆಟ್ ತಂಡದ ಆಡಳಿತ ಮತ್ತು ಹಿರಿಯ ಸೀಮಿತ ಓವರ್‌ಗಳ ಆಟಗಾರರ ನಡುವೆ ಸಂವಹನ ಕೊರತೆ ಉಂಟಾಗಿರುವ ಬಗ್ಗೆಯೂ ಕಳವಳಗಳಿವೆ ಎನ್ನುವುದನ್ನು ಆ ಅಧಿಕಾರಿ ಒಪ್ಪಿಕೊಂಡಿದ್ದಾರೆ. ‘‘ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅದರ ಬಳಿಕ ನಡೆಯುವ ಏಕದಿನ ವಿಶ್ವಕಪ್‌ಗೂ ಭಾರತ ಪ್ರಬಲ ದಾವೇದಾರ ತಂಡವಾಗಿದೆ. ಹಾಗಾಗಿ, ಈ ಸಮಸ್ಯೆಗಳನ್ನು ಕ್ಷಿಪ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ನಾವು ಬಯಸಿದ್ದೇವೆ’’ ಎಂದರು.

ಇಲ್ಲಿ ಯಾವುದೇ ಹೆಸರುಗಳು ಪ್ರಸ್ತಾಪವಾಗದಿದ್ದರೂ, ತಂಡಾಡಳಿತ ಹಾಗೂ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಕುಸಿಯುತ್ತಿರುವ ಸಂವಹನದ ಹಿನ್ನೆಲೆಯಲ್ಲಿ ಈ ಸಭೆಯನ್ನು ಏರ್ಪಡಿಸಲಾಗಿದೆ ಎನ್ನಲಾಗಿದೆ. ಈ ಇಬ್ಬರು ಆಟಗಾರರು ಅಂತರ್‌ರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಅಂದಿನಿಂದ ಈ ಇಬ್ಬರು ಆಟಗಾರರು ಮತ್ತು ತಂಡದ ಪ್ರಸಕ್ತ ಆಡಳಿತ, ಅದರಲ್ಲೂ ಮುಖ್ಯವಾಗಿ ಪ್ರಧಾನ ಕೋಚ್ ಗೌತಮ್ ಗಂಭೀರ್ ನಡುವಿನ ಸಂಪರ್ಕ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗಂಭೀರ್ ಹಾಗೂ ರೋಹಿತ್, ಕೊಹ್ಲಿ ನಡುವಿನ ಸಂಬಂಧ ಹಳಸಿದೆಯೇ?

ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಗೆ ಹೋಲಿಸಿದರೆ, ಅದೇ ತಂಡದ ವಿರುದ್ಧದ ಏಕದಿನ ಸರಣಿಯಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈಗಲೂ ಮುಖ್ಯ ಪಾತ್ರವನ್ನು ವಹಿಸುತ್ತಿದ್ದಾರೆ. ಆದರೆ ಅವರ ಭವಿಷ್ಯ ಕುರಿತ ನಿಗೂಢತೆ ಮುಂದುವರಿದಿದೆ. ಅದೇ ವೇಳೆ, ಅವರು ಮತ್ತು ಪ್ರಧಾನ ಕೋಚ್ ಗೌತಮ್ ಗಂಭೀರ್ ನಡುವಿನ ಸಂಬಂಧವು ಈಗ ಎಲ್ಲರ ಚರ್ಚೆಯ ವಿಷಯವಾಗಿದೆ.

ಪ್ರಧಾನ ಕೋಚ್ ಆಗಿ ತಂಡಕ್ಕೆ ಬಂದ ಹೊಸತರಲ್ಲಿ ಕೊಹ್ಲಿ ಮತ್ತು ರೋಹಿತ್ ಜೊತೆ ಹೊಂದಿದ್ದ ಸಂಬಂಧವನ್ನು ಗೌತಮ್ ಗಂಭೀರ್ ಈಗ ಹೊಂದಿಲ್ಲ ‘ದೈನಿಕ್ ಜಾಗರಣ್’ ಪತ್ರಿಕೆ ವರದಿ ಮಾಡಿದೆ. ವಾಸ್ತವವಾಗಿ, ಈ ಇಬ್ಬರು ಹಿರಿಯ ಆಟಗಾರರು ಮತ್ತು ಕೋಚ್ ನಡುವಿನ ಸಂಬಂಧ ಹಳಸುತ್ತಿದೆ ಎಂದು ವರದಿ ಹೇಳಿದೆ.

‘‘ಗೌತಮ್ ಗಂಭೀರ್ ಹಾಗೂ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಸಂಬಂಧವು ಎಷ್ಟು ಉತ್ತಮವಾಗಿರಬೇಕಾಗಿತ್ತೋ ಅಷ್ಟು ಉತ್ತಮವಾಗಿಲ್ಲ. ಈ ಇಬ್ಬರು ಆಟಗಾರರ ಭವಿಷ್ಯಕ್ಕೆ ಸಂಬಂಧಿಸಿ ಒಂದು ಸಭೆ ನಡೆಯುವ ಸಾಧ್ಯತೆಯಿದೆ. ಇದು ರಾಯ್ಪುರ ಅಥವಾ ವಿಶಾಖಪಟ್ಟಣಂನಲ್ಲಿ ನಡೆಯಬಹುದಾಗಿದೆ. ಈ ನಗರಗಳಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕ ವಿರುದ್ಧದ ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ’’ ಎಂದು ದೈನಿಕ್ ಜಾಗರಣ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News