2026ರ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿದ ಬ್ರೆಝಿಲ್, ಈಕ್ವೆಡಾರ್
PC : X \ @EPLSL
ಸಾವೊ ಪೌಲೊ: ಮುಂದಿನ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು 32ರಿಂದ 48ಕ್ಕೆ ಏರಿಸಲಾಗಿದ್ದು, ಜಗತ್ತಿನಾದ್ಯಂತ ನಡೆಯುತ್ತಿರುವ ಅರ್ಹತಾ ಪಂದ್ಯಗಳು ಕೊನೆಯ ಹಂತ ತಲುಪಿವೆ. ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಜಾಗತಿಕ ಫುಟ್ಬಾಲ್ ಪಂದ್ಯಾವಳಿಗೆ ಇದೀಗ ಬ್ರೆಝಿಲ್ ಹಾಗೂ ಈಕ್ವೆಡಾರ್ ತಂಡಗಳು ಅರ್ಹತೆ ಪಡೆದಿವೆ.
ಬ್ರೆಝಿಲ್ ತಂಡವು ಈವರೆಗಿನ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲಿ ಅರ್ಹತೆ ಪಡೆದ ಏಕೈಕ ದೇಶ ಎನಿಸಿಕೊಂಡು ವಿಶಿಷ್ಟ ದಾಖಲೆ ಉಳಿಸಿಕೊಂಡಿದೆ.
ಆಸ್ಟ್ರೇಲಿಯ ತಂಡವು ಏಶ್ಯನ್ ಕ್ವಾಲಿಫೈಯಿಂಗ್‌ನಲ್ಲಿ ಸೌದಿ ಅರೇಬಿಯ ತಂಡವನ್ನು 2-1 ಅಂತರದಿಂದ ಮಣಿಸಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
ಇದೇ ವೇಳೆ ಚಿಲಿ ಫುಟ್ಬಾಲ್ ತಂಡವು ಸತತ ಮೂರನೇ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆಯುವುದರಿಂದ ವಂಚಿತವಾಗಿದೆ.
10 ಆಟಗಾರರನ್ನು ಹೊಂದಿದ್ದ ಅರ್ಜೆಂಟೀನ ತಂಡವು 2026ರ ಆವೃತ್ತಿಯ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಕೊಲಂಬಿಯಾ ವಿರುದ್ಧ ರೋಚಕ ಡ್ರಾ ಸಾಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಬ್ರೆಝಿಲ್ ತಂಡವು ಪರಾಗ್ವೆ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿದೆ.
ರಿಯಲ್ ಮ್ಯಾಡ್ರಿಡ್‌ನ ಫಾರ್ವರ್ಡ್ ಆಟಗಾರ ವಿನಿಸಿಯಸ್ ಜೂನಿಯರ್ 44ನೇ ನಿಮಿಷದಲ್ಲಿ ಬ್ರೆಝಿಲ್ ಪರ ಏಕೈಕ ಗೋಲು ಗಳಿಸಿದರು.
ದಕ್ಷಿಣ ಅಮೆರಿಕ ಕಾನ್ಫಡರೇಶನ್ ಅಂಕಪಟ್ಟಿಯಲ್ಲಿ 16 ಪಂದ್ಯಗಳಲ್ಲಿ 25 ಅಂಕ ಗಳಿಸಿರುವ ಬ್ರೆಝಿಲ್ ಮೂರನೇ ಸ್ಥಾನದಲ್ಲಿದೆ. ಅಗ್ರ-6ರಲ್ಲಿ ಸ್ಥಾನ ಪಡೆಯುವ ತಂಡಗಳು ಫಿಫಾ ವಿಶ್ವಕಪ್ ಟೂರ್ನಿಗೆ ಸ್ವಯಂ ಆಗಿ ಅರ್ಹತೆ ಪಡೆಯುತ್ತವೆ.
5ನೇ ಬಾರಿ ಇಕ್ವೆಡಾರ್ ಅರ್ಹತೆ: ಲಿಮಾದಲ್ಲಿ ಮಂಗಳವಾರ ಪೆರು ತಂಡದ ವಿರುದ್ಧ ಗೋಲುರಹಿತ ಡ್ರಾಗೊಳಿಸಿರುವ ಇಕ್ವೆಡಾರ್ ತಂಡವು ಐದನೇ ಬಾರಿ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
2022ರಲ್ಲಿ ಖತರ್‌ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಸೋತು ನಿರ್ಗಮಿಸಿದ್ದ ಇಕ್ವೆಡಾರ್ ತಂಡ ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯಲು ಅಗತ್ಯವಿರುವ ಏಕೈಕ ಅಂಕವನ್ನು ಗಳಿಸಿತು.
ಈ ಫಲಿತಾಂಶದೊಂದಿಗೆ ದಕ್ಷಿಣ ಅಮೆರಿಕದ 10 ತಂಡಗಳಿರುವ ಅಂಕಪಟ್ಟಿಯಲ್ಲಿ 16 ಪಂದ್ಯಗಳಲ್ಲಿ 25 ಅಂಕ ಗಳಿಸಿರುವ ಇಕ್ವೆಡಾರ್ ತಂಡ 2ನೇ ಸ್ಥಾನ ಪಡೆದಿದೆ. ಸ್ವಯಂ ಆಗಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿದೆ.
ಸತತ 3ನೇ ವಿಶ್ವಕಪ್‌ನಿಂದ ವಂಚಿತವಾದ ಚಿಲಿ: ಬೊಲಿವಿಯಾ ತಂಡದ ವಿರುದ್ಧ್ದ 0-2 ಗೋಲುಗಳ ಅಂತರದಿಂದ ಸೋತ ನಂತರ ಚಿಲಿ ತಂಡ ದಕ್ಷಿಣ ಅಮೆರಿಕದ 10 ತಂಡಗಳಿರುವ ರೌಂಡ್-ರಾಬಿನ್ ಪಂದ್ಯಾವಳಿಯಲ್ಲಿ ಕೊನೆಯ ಸ್ಥಾನ ತಲುಪಿದ್ದು ಸತತ 3ನೇ ಬಾರಿ ವಿಶ್ವಕಪ್‌ನಲ್ಲಿ ಆಡುವುದರಿಂದ ವಂಚಿತವಾಗಿದೆ.
ಬೊಲಿವಿಯಾ ತಂಡವು 5ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು. 90ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.
ತಂಡದ ವೈಫಲ್ಯದ ಹೊಣೆ ಹೊತ್ತು ಕೋಚ್ ಹುದ್ದೆ ತ್ಯಜಿಸುವುದಾಗಿ ಚಿಲಿ ತಂಡದ ಮುಖ್ಯ ಕೋಚ್ ರಿಕಾರ್ಡೊ ಗರೇಕ ಹೇಳಿದ್ದಾರೆ.
ರೊಡ್ರಿಗೋ ಅಗುಯಿರ್ರೆ ಹಾಗೂ ಜಾರ್ಜಿಯನ್ ಡಿ ಅರಾಸ್ಕೇಟಾ ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ ಉರುಗ್ವೆ ತಂಡ ತನ್ನ ತಾಯ್ನಾಡಿನಲ್ಲಿ ವೆನೆಜುವೆಲಾ ತಂಡವನ್ನು 2-0 ಅಂತರದಿಂದ ಮಣಿಸಿತು. 16 ಪಂದ್ಯಗಳಲ್ಲಿ 24 ಅಂಕಗಳನ್ನು ಗಳಿಸಿ ವಿಶ್ವಕಪ್‌ನಲ್ಲಿ ನೇರ ಪ್ರವೇಶ ಪಡೆಯುವುದರಿಂದ ಒಂದು ಹೆಜ್ಜೆ ಹಿಂದಿದೆ. ವೆನೆಜುವೆಲಾ ತಂಡ 18 ಅಂಕ ಗಳಿಸಿ ಬೊಲಿವಿಯಾಗಿಂತ ಮುಂದಿದೆ. 7ನೇ ಸ್ಥಾನಕ್ಕಾಗಿ ಹೋರಾಡಲಿದೆ. ಉರುಗ್ವೆ ತಂಡವು 8ನೇ ಸ್ಥಾನದಲ್ಲಿರುವ ಬೊಲಿವಿಯಾಗಿಂತ 7 ಅಂಕದಿಂದ ಮುಂದಿದೆ.
2015 ಹಾಗೂ 2016ರಲ್ಲಿ ಎರಡು ಬಾರಿ ಕೋಪಾ ಅಮೆರಿಕ ಪ್ರಶಸ್ತಿಗಳನ್ನು ಗೆದ್ದಿರುವ ಚಿಲಿ ತಂಡ ಮುಂದಿನ ವರ್ಷ 48 ತಂಡಗಳು ಸ್ಪರ್ಧಿಸಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
‘‘ನನಗೆ ಬಳಹಷ್ಟು ಬೇಸರವಾಗುತ್ತಿದೆ. ಈ ರೀತಿ ಎಂದಿಗೂ ಆಗಿಲ್ಲ. ನಮ್ಮನ್ನು ಕ್ಷಮಿಸುವಂತೆ ನಾವು ಜನರನ್ನು ಕೇಳಿಕೊಳ್ಳಬೇಕಾಗಿದೆ. ನಾವು ನಮ್ಮ ಕೆಲಸವನ್ನು ಮುಂದುವರಿಸಬೇಕು. ಈಗಾಗಲೇ ಬದಲಾವಣೆ ಆಗಿದೆ. ಸುವರ್ಣ ತಲೆಮಾರು ಇಲ್ಲವಾಗಿದೆ. ನಾನೊಬ್ಬನೇ ಉಳಿದಿದ್ದೇನೆ’’ ಎಂದು ಚಿಲಿ ತಂಡದ ಅನುಭವಿ ಸ್ಟ್ರೈಕರ್ ಅಲೆಕ್ಸಿಸ್ ಸ್ಯಾಂಚೆಝ್ ಹೇಳಿದ್ದಾರೆ.