ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕ್ರಿಕೆಟ್ ತಂಡದ ಸಾಧನೆ | 8 ಆವೃತ್ತಿಗಳಲ್ಲಿ ಎರಡು ಪ್ರಶಸ್ತಿ, 4 ಬಾರಿ ಫೈನಲ್
PC : X
ಹೊಸದಿಲ್ಲಿ: ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಆರಂಭಿಕ ಹಣಾಹಣಿಯ ಮೂಲಕ ಬುಧವಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಕರಾಚಿಯಲ್ಲಿ ಆರಂಭವಾಗಲಿದೆ. ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡಗಳ ಪೈಕಿ ಒಂದಾಗಿರುವ ಭಾರತ ಕ್ರಿಕೆಟ್ ತಂಡದತ್ತ ಎಲ್ಲರ ಚಿತ್ತ ಹರಿದಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾವು ಪ್ರಬಲ ಸ್ಪರ್ಧಿಯಾಗಿ ಸ್ಪರ್ಧಾವಳಿಯನ್ನು ಪ್ರವೇಶಿಸುತ್ತಿದೆ. ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಜೊತೆಗೆ ಬಲಿಷ್ಠ ಆಲ್‌ರೌಂಡ್ ವಿಭಾಗದೊಂದಿಗೆ ತಂಡವು ಸಮತೋಲಿತವಾಗಿದೆ.
ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಶಕ್ತಿ ತುಂಬಬಲ್ಲರು. ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಸೇರ್ಪಡೆಯೊಂದಿಗೆ ತಂಡದಲ್ಲಿ ಮತ್ತಷ್ಟು ವೈವಿದ್ಯತೆ ಕಂಡುಬಂದಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟುಕೊಂಡಿರುವ ಭಾರತ ತಂಡವು ‘ಮಿನಿ ವಿಶ್ವಕಪ್’ ಎನಿಸಿಕೊಂಡಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ 3ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
► ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ದಾಖಲೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವು ಶ್ರೀಮಂತ ಇತಿಹಾಸ ಹೊಂದಿದ್ದು, ಈ ತನಕ ನಡೆದಿರುವ 8 ಆವೃತ್ತಿಗಳ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ್ದರೆ, ನಾಲ್ಕು ಬಾರಿ ಫೈನಲ್‌ಗೆ ತಲುಪಿದೆ. 2002ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎಂದು ಮರು ನಾಮಕರಣವಾಗುವ ಮುಂಚೆ ಈ ಟೂರ್ನಿಯನ್ನು ‘ಐಸಿಸಿ ನಾಕೌಟ್ ಟ್ರೋಫಿ ’ಎಂದು ಕರೆಯಲಾಗುತ್ತಿತ್ತು.
1998(ಬಾಂಗ್ಲಾದೇಶ): ಮುಹಮ್ಮದ್ ಅಝರುದ್ದೀನ್ ನೇತೃತ್ವದ ಭಾರತವು 1998ರಲ್ಲಿ ಸೆಮಿ ಫೈನಲ್‌ಗೆ ತಲುಪಿತ್ತು. ಆದರೆ ವೆಸ್ಟ್‌ಇಂಡೀಸ್ ವಿರುದ್ಧ 6 ವಿಕೆಟ್ ಗಳಿಂದ ಸೋತಿತ್ತು. ದಕ್ಷಿಣ ಆಫ್ರಿಕಾ ತಂಡವು ಪಂದ್ಯಾವಳಿಯನ್ನು ಜಯಿಸಿತ್ತು.
2000(ಕೀನ್ಯ): ಸೌರವ್ ಗಂಗುಲಿ ನಾಯಕತ್ವದ ಭಾರತ ತಂಡವು ಫೈನಲ್‌ಗೆ ತಲುಪಿತ್ತು. ಆದರೆ ನ್ಯೂಝಿಲ್ಯಾಂಡ್ ವಿರುದ್ಧ 4 ವಿಕೆಟ್ ಗಳ ಅಂತರದಿಂದ ಸೋಲುಂಡಿತ್ತು. ಗಂಗುಲಿ ಅವರ 117 ರನ್ ವ್ಯರ್ಥವಾಗಿತ್ತು. ಔಟಾಗದೆ 102 ರ ನ್ ಗಳಿಸಿದ್ದ ಕ್ರಿಸ್ ಕೈರ್ನ್ಸ್ ಕಿವೀಸ್ ಗೆ ಕೊನೆಯ ಓವರ್‌ನಲ್ಲಿ ರೋಚಕ ಜಯ ತಂದುಕೊಟ್ಟಿದ್ದರು.
2002(ಶ್ರೀಲಂಕಾ): ನಿಗದಿತ ಎರಡೂ ದಿನಗಳ ಕಾಲ ಮಳೆ ಕಾಟ ನೀಡಿದ್ದ ಕಾರಣ ಫೈನಲ್‌ಗೆ ತಲುಪಿದ್ದ ಸೌರವ್ ಗಂಗುಲಿ ಸಾರಥ್ಯದ ಭಾರತ ಹಾಗೂ ಆತಿಥೇಯ ಶ್ರೀಲಂಕಾ ತಂಡವನ್ನು ‘ಜಂಟಿ ವಿಜೇತರು’ ಎಂದು ಘೋಷಿಸಲಾಯಿತು.
2004(ಇಂಗ್ಲೆಂಡ್): ಪಾಕಿಸ್ತಾನದ ವಿರುದ್ಧ ಸೋತ ನಂತರ ಭಾರತ ಕ್ರಿಕೆಟ್ ತಂಡವು ಗ್ರೂಪ್ ಹಂತವನ್ನು ದಾಟುವಲ್ಲಿ ವಿಫಲವಾಯಿತು.
2006(ಭಾರತ): ಪಂದ್ಯಾವಳಿಯ ಆತಿಥ್ಯವಹಿಸಿದ್ದ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ನೇತೃತ್ವವಹಿಸಿದ್ದರು. ಗ್ರೂಪ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಮಾತ್ರ ಜಯ ಸಾಧಿಸುವಲ್ಲಿ ಶಕ್ತವಾಗಿದ್ದ ಭಾರತ ತಂಡವು ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿತ್ತು.
2009(ದಕ್ಷಿಣ ಆಫ್ರಿಕಾ): ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ತಂಡವು ಗ್ರೂಪ್ ಹಂತದಲ್ಲಿ ಟೂರ್ನಿಯಿಂದ ನಿರ್ಗಮಿಸಿತ್ತು. ಸತತ ಮೂರನೇ ಆವೃತ್ತಿಯ ಟೂರ್ನಿಯಲ್ಲಿ ಬೇಗನೆ ಹೊರ ಬಿದ್ದಿತ್ತು. ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ತಂಡದ ವಿರುದ್ಧ್ದ ಸೋತಿತ್ತು.
2013(ಇಂಗ್ಲೆಂಡ್): ಸತತ ವೈಫಲ್ಯದಿಂದ ಪುಟಿದೆದ್ದ ಧೋನಿ ನಾಯಕತ್ವದ ಭಾರತ ತಂಡವು ಪಂದ್ಯಾವಳಿಯಲ್ಲಿ ಒಂದೂ ಪಂದ್ಯವನ್ನು ಸೋಲದೆ 2ನೇ ಬಾರಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿತು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 5 ರನ್‌ನಿಂದ ರೋಚಕವಾಗಿ ಮಣಿಸಿತ್ತು.
2017(ಇಂಗ್ಲೆಂಡ್): ಭಾರತ ತಂಡವು 4ನೇ ಬಾರಿ ಫೈನಲ್‌ಗೆ ತಲುಪಿತ್ತು. ಆದರೆ ಪಾಕಿಸ್ತಾನ ತಂಡದ ವಿರುದ್ಧ 180 ರನ್ ಅಂತರದಿಂದ ಸೋತಿತ್ತು. ಫಖರ್ ಝಮಾನ್ ಶತಕ ಸಿಡಿಸಿ ಪಾಕಿಸ್ತಾನ ತಂಡವು ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ನೆರವಾಗಿದ್ದರು.