ಚೆನ್ನೈ ಓಪನ್ : ನಾಳೆ ಸೆಮಿಫೈನಲ್ ನಲ್ಲಿ ಸುಮಿತ್ ನಾಗಲ್, ಡಾಲಿಬೊರ್ ಮುಖಾಮುಖಿ
ಸುಮಿತ್ ನಾಗಲ್ | Photo: X
ಚೆನ್ನೈ : ಚೆನ್ನೈ ಓಪನ್ 2024 ಟೆನಿಸ್ ಪಂದ್ಯಾವಳಿಯಲ್ಲಿ, ಭಾರತದ ಸುಮಿತ್ ನಾಗಲ್ ಪುರುಷರ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ನಲ್ಲಿ ಎರಡನೇ ಶ್ರೇಯಾಂಕದ ಸುಮಿತ್ ಝೆಕ್ ರಿಪಬ್ಲಿಕ್ ನ ಡೋಮಿನಿಕ್ ಪಾಲನ್ ರನ್ನು 6-3, 6-3 ಸೆಟ್ ಗಳಿಂದ ಸೋಲಿಸಿದರು.
ಕ್ವಾರ್ಟರ್ಫೈನಲ್ ಪ್ರವೇಶಿಸಲು ಸುಮಿತ್, ಜಿಯೊವಾನಿ ಫೋನಿಯೊ ವಿರುದ್ಧ ತೀವ್ರ ಸೆಣಸಾಟ ನಡೆಸಬೇಕಾಗಿತ್ತು. ಆದರೆ, ಅವರ ಶುಕ್ರವಾರ ಅವರ ಸೆಮಿಫೈನಲ್ ಹಾದಿ ಸುಗಮವಾಗಿತ್ತು.
ಪಂದ್ಯದ ಹೆಚ್ಚಿನ ಅವಧಿಯಲ್ಲಿ ಸುಮಿತ್ ಆಟದ ಮೇಲೆ ನಿಯಂತ್ರಣ ಸಾಧಿಸಿದ್ದರು. ಅವರು ಒಂದು ಗಂಟೆ 31 ನಿಮಿಷಗಳಲ್ಲಿ ಜಯ ಸಾಧಿಸಿದರು.
ಈ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ಗಾಗಿ ನನ್ನ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಉದ್ದೇಶಿಸಿದ್ದೇನೆ ಎಂದು ಇದಕ್ಕೂ ಮೊದಲು 26 ವರ್ಷದ ನಾಗಲ್ ಹೇಳಿದ್ದರು.
‘‘ದೈಹಿಕವಾಗಿ ಸಮರ್ಥವಾಗಿರುವುದು ಮೊದಲ ಆದ್ಯತೆಯಾಗಿದೆ. ಎರಡನೇ ಆದ್ಯತೆ ಒಲಿಂಪಿಕ್ಸ್ನಲ್ಲಿ ಆಡುವುದು. ಇದೊಂದು ಅತ್ಯುತ್ತಮ ಅನುಭವವಾಗಿದೆ. ಆದರೆ, ಅದಕ್ಕೆ ನಾವು ಅಗ್ರ 100ರ ಪಟ್ಟಿಯಲ್ಲಿ ಇರಬೇಕು’’ ಎಂದು ಅವರು ಹೇಳಿದ್ದರು.
ಶನಿವಾರ ನಡೆಯುವ ಸೆಮಿಫೈನಲ್ನಲ್ಲಿ ಅವರು ಝೆಕ್ ದೇಶದ ಡಾಲಿಬೊರ್ ಸವರ್ಸಿನರನ್ನು ಎದುರಿಸಲಿದ್ದಾರೆ.
ಶುಕ್ರವಾರ ನಡೆದ ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ, ಡಾಲಿಬೊರ್ ಭಾರತದ ಮುಕುಂದ ಶಶಿಕುಮಾರ್ರನ್ನು 6-7(6), 6-2, 6-4 ಸೆಟ್ಗಳಿಂದ ಸೋಲಿಸಿದರು.