ನಿವೃತ್ತಿ ನಿರ್ಧಾರ ಹಿಂಪಡೆದ ಫುಟ್ ಬಾಲ್ ತಾರೆ ಸುನೀಲ್ ಚೆಟ್ರಿ
Photo : twitter/chetrisunil11
ಪಣಜಿ: ಮುಂಬರುವ ಎಎಫ್‌ಸಿ ಏಶ್ಯನ್ ಕಪ್ 2027ರ ಅರ್ಹತಾ ಸುತ್ತಿನಲ್ಲಿ ಭಾರತೀಯ ಫುಟ್ ಬಾಲ್ ತಂಡ ಅರ್ಹತೆ ಗಿಟ್ಟಿಸುವುದನ್ನು ಖಾತರಿ ಪಡಿಸಲು ಭಾರತೀಯ ಫುಟ್ ಬಾಲ್ ತಂಡದ ತಾರಾ ಆಟಗಾರ ಸುನೀಲ್ ಚೆಟ್ರಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದಾರೆ.
ಮಾರ್ಚ್ 19ರಂದು ಮಾಲ್ಡೀವ್ಸ್ ವಿರುದ್ಧ ನಡೆಯಲಿರುವ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ಹಾಗೂ ಮಾರ್ಚ್ 25ರಂದು ಶಿಲ್ಲಾಂಗ್ ನಲ್ಲಿ ಏಶ್ಯ ಕಪ್ ಅರ್ಹತಾ ಸುತ್ತಿನ ಸಿ ಗುಂಪಿನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆಡಲಿರುವ ಭಾರತೀಯ ಫುಟ್ ಬಾಲ್ ತಂಡದ ಸಂಭವನೀಯ 26 ಆಟಗಾರರ ಪಟ್ಟಿಯಲ್ಲಿ ಸುನೀಲ್ ಚೆಟ್ರಿ ಅವರ ಹೆಸರನ್ನೂ ಸೇರ್ಪಡೆ ಮಾಡಲಾಗಿದೆ.
2024ರಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸದ ಭಾರತ ತಂಡವನ್ನು ಬಾಂಗ್ಲಾದೇಶ, ಹಾಂಗ್ ಕಾಂಗ್ ಹಾಗೂ ಸಿಂಗಪೂರ ತಂಡಗಳ ಜೊತೆ ಸೇರ್ಪಡೆ ಮಾಡಲಾಗಿದ್ದು, ಈ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಏಶ್ಯ ಕಪ್ ಗೆ ಅರ್ಹತೆ ಗಿಟ್ಟಿಸಲಿದೆ.